ಭಾನುವಾರ, ಸೆಪ್ಟೆಂಬರ್ 15, 2019
26 °C
ಸುಗಂಧ ದ್ರವ್ಯ ಲೇಪಿತ ಪಂಜಾಗಳ ಮೆರವಣಿಗೆ: ವ್ರತ ಅಂತ್ಯ

ಬಲಿದಾನದ ನೆನಪಲ್ಲಿ ಮೊಹರಂ ಆಚರಣೆ

Published:
Updated:
Prajavani

ಕೋಲಾರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಮತ್ತು ಮಂಗಳವಾರ ಮುಸ್ಲಿಂ ಬಾಂಧವರು ಶೋಕಪೂರಿತ ಮೊಹರಂ ಕಡೆ ದಿನ ಆಚರಿಸಿದರು.

ಪ್ರವಾದಿ ಮಹಮ್ಮದ್‌ ಪೈಗಂಬರ್‌ರ ಮೊಮ್ಮಕ್ಕಳಾದ ಇಮಾಮ್‌ ಹುಸೇನ್ ಮತ್ತು ಹಸನ್‌ರ ಬಲಿದಾನದ ನೆನಪಿಗಾಗಿ ದರ್ಗಾಗಳಲ್ಲಿ 10 ದಿನಗಳ ಕಾಲ ಪಂಜಾ ಪೂಜಿಸಿದ ಮುಸ್ಲಿಮರು ಕಡೆಯ ದಿನವಾದ ಸೋಮವಾರ ರಾತ್ರಿ ಶೋಕ ಗೀತೆ ಹಾಡುತ್ತಾ ಪ್ರಮುಖ ರಸ್ತೆಗಳಲ್ಲಿ ಪಂಜಾಗಳ ಮೆರವಣಿಗೆ ನಡೆಸಿದರು.

ಪ್ರಮುಖ ದರ್ಗಾಗಳ ವ್ಯಾಪ್ತಿಯಲ್ಲಿ ನಡೆದ ಪಂಜಾ ಮೆರವಣಿಗೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಇಮಾಮ್‌ ಹುಸೇನ್‌ ಮತ್ತು ಹಸನ್‌ರ ಬಲಿದಾನಕ್ಕೆ ಕಾರಣವಾದ ಕರ್ಬಲಾ ಯುದ್ಧದ ಘೋರ ಚಿತ್ರಣವನ್ನು ಮೆರವಣಿಗೆ ಉದ್ದಕ್ಕೂ ಭಜನೆ ರೂಪದಲ್ಲಿ ಹಾಡಲಾಯಿತು.

ಸಮುದಾಯದ ಕೆಲವರು ಮಂಗಳ ಹಸ್ತದ ಗುರುತುಗಳನ್ನು ಹೊತ್ತು ಸಾಗಿದರು. ಮತ್ತೆ ಕೆಲವರು ಸಕ್ಕರೆ ಕಳ್ಳೆಪಪ್ಪು ಪೂಜೆಗೆ ನೀಡಿ ಹರಕೆ ತೀರಿಸಿದರು. ಅಲ್ಲದೇ, ಕಾಣಿಕೆ ನೀಡಿ ನವಿಲು ಗರಿಯ ಕುಚ್ಚದಿಂದ ಆಶೀರ್ವಾದ ಪಡೆದರು. ಹೂವುಗಳಿಂದ ಅಲಂಕೃತವಾಗಿದ್ದ ಸುಗಂಧ ದ್ರವ್ಯ ಲೇಪಿತ ಪಂಜಾಗಳನ್ನು ಪೂಜಿಸಿ ದರ್ಗಾಗಳಿಗೆ ಕೊಂಡೊಯ್ದು ಮೊಹರಂ ವ್ರತ ಅಂತ್ಯಗೊಳಿಸಿದರು.

ಹೊಸ ವರ್ಷ ಆರಂಭ: ‘ಮೊಹರಂ ವ್ರತ ಆಚರಣೆ ಮೂಲಕ ಮುಸ್ಲಿಮರ ಹೊಸ ವರ್ಷ ಆರಂಭವಾಗುತ್ತದೆ. ಸಮುದಾಯದವರ ಅತ್ಯಂತ ಪವಿತ್ರ ನಾಲ್ಕು ತಿಂಗಳುಗಳ ಪೈಕಿ ಮೊದಲ ತಿಂಗಳಾದ ಮೊಹರಂ ಸಹ ಸೇರಿದೆ’ ಎಂದು ಕೋಲಾರ ನಿವಾಸಿ ಆಸಿಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಸ್ಲಿಂ ಧರ್ಮ ಪ್ರತಿಪಾದಿಸಿದ ಇಮಾಮ್‌ ಹುಸೇನ್ ಸಹೋದರರು ಮತ್ತು ಧರ್ಮಕ್ಕೆ ವಿರುದ್ಧವಾಗಿದ್ದ ಯಾಜಿದ್‌ ನಡುವೆ ನಡೆದ ಯುದ್ಧದಲ್ಲಿ ಹುಸೇನ್‌ ಹಾಗೂ ಕುಟುಂಬ ಸದಸ್ಯರು ವೀರ ಮರಣವನ್ನಪ್ಪಿದರು. ಅದರ ನೆನಪಿಗಾಗಿ ಮೊಹರಂ ಆಚರಿಸಲಾಗುತ್ತದೆ’ ಎಂದು ವಿವರಿಸಿದರು.

‘ಘೋರ ಯುದ್ಧದ 7ನೇ ದಿನ ಇಮಾಮ್‌ ಹುಸೇನ್‌ಗೆ ನೀರು ನಿರಾಕರಿಸಲಾಯಿತು. 10ನೇ ದಿನ ಆತನನ್ನು ಕೊಲ್ಲಲಾಯಿತು. ಈ ದಿನದ ನೆನಪಿನಲ್ಲಿ ಸಮುದಾಯದ ಶಿಯಾ ಪಂಗಡದವರು ಶೋಕಿಸುತ್ತಾರೆ. ಸುನ್ನಿ ಪಂಗಡದವರು ಉಪವಾಸ ವ್ರತ ಆಚರಿಸುತ್ತಾರೆ’ ಎಂದು ಹೇಳಿದರು.

Post Comments (+)