ಬುಧವಾರ, ಏಪ್ರಿಲ್ 14, 2021
24 °C

ಕೋಲಾರ: ಕೆರೆಗೆ ಹಾರಿ ತಾಯಿ–ಮಗಳ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಆಸ್ತಿ ವಿವಾದ ಹಾಗೂ ಸಾಲ ಬಾಧೆ ಕಾರಣಕ್ಕೆ ತಾಯಿ ಮತ್ತು ಮಗಳು ತಾಲ್ಲೂಕಿನ ನರಸಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಬೆಂಗಳೂರಿನ ಹೊರಮಾವು ನಿವಾಸಿ ನಂದಿತಾ (45) ಮತ್ತು ಅವರ ಪುತ್ರಿ ಪ್ರಗತಿ (21) ಆತ್ಮಹತ್ಯೆ ಮಾಡಿಕೊಂಡವರು. ನಂದಿತಾ ಅವರ ಪತಿ ಕೇಶವಮೂರ್ತಿ ಅವರು 3 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಕೇಶವಮೂರ್ತಿ ಅವರು ಸಂಬಂಧಿಕರ ಬಳಿ ಸುಮಾರು ₹ 10 ಲಕ್ಷ ಸಾಲ ಮಾಡಿಕೊಂಡಿದ್ದರು. ಅವರು ಮೃತಪಟ್ಟ ನಂತರ ಸಾಲ ಹಿಂದಿರುಗಿಸುವಂತೆ ಸಂಬಂಧಿಕರು ನಂದಿತಾ ಅವರನ್ನು ಒತ್ತಾಯಿಸುತ್ತಿದ್ದರು. ಮತ್ತೊಂದೆಡೆ ಕೇಶವಮೂರ್ತಿ ಅವರ ಸಹೋದರರು ಆಸ್ತಿ ವಿಚಾರವಾಗಿ ನಂದಿತಾ ಅವರೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲಗಾರರು, ಸಂಬಂಧಿಕರ ಕಿರುಕುಳದಿಂದ ಬೇಸರಗೊಂಡಿದ್ದ ನಂದಿತಾ ಮತ್ತು ಪ್ರಗತಿ ಅವರು ಮಂಗಳವಾರ ರಾತ್ರಿ ನರಸಾಪುರ ಬಳಿ ಬಂದು ಸೊಂಟಕ್ಕೆ ದುಪಟ್ಟ ಕಟ್ಟಿಕೊಂಡು ಒಟ್ಟಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಕೆರೆಯಿಂದ ಮೃತರ ಶವ ಹೊರತೆಗೆದು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ಮತ್ತು ಮಗಳು ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಾಲಗಾರರ ಹಾಗೂ ಸಂಬಂಧಿಕರ ಕಿರುಕುಳ ಕಾರಣವೆಂದು ಪತ್ರ ಬರೆದಿಟ್ಟಿದ್ದಾರೆ. ಪ್ರಗತಿ, ಬಿ.ಟೆಕ್‌ ಓದುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.