ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಖಲಿಸ್ತಾನ ಮಾಡುವ ಹುನ್ನಾರ: ಕಾಂಗ್ರೆಸ್‌ ನಾಯಕರ ವಿರುದ್ಧ ಸಂಸದ ಮುನಿಸ್ವಾಮಿ

Last Updated 30 ಜನವರಿ 2021, 15:30 IST
ಅಕ್ಷರ ಗಾತ್ರ

ಕೋಲಾರ: ‘ದೆಹಲಿಯನ್ನು ಖಲಿಸ್ತಾನ ಮಾಡುವ ಹುನ್ನಾರದಿಂದ ಪಂಜಾಬ್‌ನ ಕಿಡಿಗೇಡಿಗಳು, ಹೊರ ರಾಷ್ಟ್ರದವರು ಹಾಗೂ ಕಾಂಗ್ರೆಸ್‌ ಮುಖಂಡರು ಸಂಚು ರೂಪಿಸಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿಡಿಕಾರಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರು ದೆಹಲಿಯಲ್ಲಿ ಶಾಂತಿಯುತವಾಗಿ ಟ್ರ್ಯಾಕ್ಟರ್‌ ಪರೇಡ್‌ ನಡೆಸಬೇಕಿತ್ತು. ಅದನ್ನು ಬಿಟ್ಟು ವಿದ್ವಂಸಕ ಕೃತ್ಯ ನಡೆಸಿದ್ದು ಖಂಡನೀಯ. ಕಮ್ಯೂನಿಸ್ಟರು ಕೆಂಪು ಬಾವುಟ ಹಿಡಿದು ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ರಾಷ್ಟ್ರ ದ್ರೋಹಿಗಳನ್ನು ಕ್ಷಮಿಸುವ ಪ್ರಶ್ನೆಯಿಲ್ಲ’ ಎಂದರು.

‘ಪ್ರಧಾನಿ ಮೋದಿಯವರು ಸರ್ಕಾರದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ಬಳಸುವುದಿಲ್ಲ. ಸರ್ಕಾರದ ಹಣದಲ್ಲಿ ರಾಮಮಂದಿರ ನಿರ್ಮಿಸುವ ಬದಲಿಗೆ ರಾಮಮಂದಿರ ದೇಶದ ಸ್ವತ್ತಾಗಬೇಕೆಂಬ ಉದ್ದೇಶದಿಂದ ಮನೆ ಮನೆಗೆ ತೆರಳಿ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇಶದ ಜನರ ಬಹುವರ್ಷಗಳ ಬೇಡಿಕೆಯಂತೆ ರಾಮಮಂದಿರ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮ ದೇವರ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಅವರ ಮನಸ್ಸಿನಲ್ಲೂ ರಾಮಮಂದಿರ ನಿರ್ಮಿಸುವ ಆಸೆಯಿದೆ. ಆದರೆ, ರಾಜಕೀಯದ ಕಾರಣಕ್ಕೆ ರಾಮಮಂದಿರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಶ್ರೀರಾಮ ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ’ ಎಂದು ಕುಟುಕಿದರು.

ಭ್ರಮನಿರಸನ: ‘ಸಿದ್ದರಾಮಯ್ಯ ಅವರ ಕ್ಷೀರ ಭಾಗ್ಯ, ಅನ್ನ ಭಾಗ್ಯ ಎಲ್ಲವೂ ಜನರದ್ದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರದ್ದೇ ಆಗಿರುತ್ತವೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಂಡು ವಿರೋಧ ಪಕ್ಷಗಳ ಮುಖಂಡರು ಭ್ರಮನಿರಸನಗೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ದೇಶದ ಜನರ ಹಿತದೃಷ್ಟಿಯಿಂದ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪುಗಳಿಗೆ ಸಿಲುಕಿಲ್ಲ. ಹೀಗಾಗಿ ಕಾಂಗ್ರೆಸ್‌ ಮುಖಂಡರು ರಾಮಮಂದಿರ ವಿಚಾರ ಹಾಗೂ ಕೃಷಿ ಕಾಯ್ದೆ ವಿಚಾರದಲ್ಲಿ ನಕಲಿ ರೈತರನ್ನು ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT