ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಸಂಕೀರ್ಣಕ್ಕೆ ಚನ್ನಯ್ಯರ ಹೆಸರಿಡಿ: ಬಾಲಾಜಿ ಚನ್ನಯ್ಯ ಆಗ್ರಹ

ನಗರಸಭೆ ಸಾಮಾನ್ಯ ಸಭೆಯಲ್ಲಿ ಮುಸ್ತಾಫ್‌ ಸಾಬ್‌ ಹೆಸರು ಪ್ರಸ್ತಾಪ: ಆಕ್ಷೇಪ
Last Updated 30 ಜುಲೈ 2021, 15:10 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಹಳೇ ಬಸ್‌ ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ಮುಸ್ತಾಫ್‌ ಸಾಬ್‌ರ ಹೆಸರಿಡಬೇಕೆಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿರುವುದು ಸರಿಯಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಹಿಂದೆ ಸಚಿವರಾಗಿದ್ದ ನನ್ನ ತಂದೆ ಟಿ.ಚನ್ನಯ್ಯ ಅವರು ಹಳೇ ಬಸ್‌ ನಿಲ್ದಾಣಕ್ಕೆ ಜಾಗ ಮಂಜೂರು ಮಾಡಿದ್ದರು’ ಎಂದು ವಿವರಿಸಿದರು.

‘ಟಿ.ಚನ್ನಯ್ಯ ರಂಗಮಂದಿರಕ್ಕೆ ಬೇರೆಯವರ ಹೆಸರಿಡಲು ಪ್ರಯತ್ನ ನಡೆದಾಗ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ನೀಡಿತ್ತು. ರಂಗಮಂದಿರದ ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದಾಗ ಟಿ.ಚನ್ನಯ್ಯ ರಂಗಮಂದಿರವೆಂದು ನಾಮಕರಣ ಮಾಡಲಾಯಿತು. ಅದೇ ರೀತಿ ಹಳೇ ಬಸ್‌ ನಿಲ್ದಾಣದ ಜಾಗವನ್ನು ಯಾವುದೇ ರೀತಿಯಲ್ಲಿ ಅಭಿವೃದ್ಧಿಪಡಿಸಿದರೂ ಚನ್ನಯ್ಯರ ಹೆಸರನ್ನೇ ಇಡಬೇಕು’ ಎಂದರು.

‘ಜಿಲ್ಲಾ ಕೇಂದ್ರದ ಮೆಕ್ಕೆ ವೃತ್ತದಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುತ್ಥಳಿ ಸ್ಥಾಪಿಸುವುದಾಗಿ ಶಾಸಕ ಕೆ.ಶ್ರೀನಿವಾಸಗೌಡರು ಹೇಳಿದ್ದಾರೆ. ನಗರಕ್ಕೆ ಕೆ.ಸಿ.ರೆಡ್ಡಿ ಏನು ಕೊಡುಗೆ ನೀಡಿದ್ದಾರೆ? ರಾಜ್ಯದ ಪ್ರಥಮ ದಲಿತ ಮಂತ್ರಿಯಾಗಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ಚನ್ನಯ್ಯ ಅವರನ್ನು ಶಾಸಕರು ಮರೆತಿರುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.

‘ಚನ್ನಯ್ಯ ಅವರು ಆರೋಗ್ಯ ಸಚಿವರಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸರ್ಕಾರ ಸದ್ಯ ಯಾವುದೇ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲ. ಆದ ಕಾರಣ ಪುತ್ಥಳಿ ಸ್ಥಾಪಿಸಿ ಗೊಂದಲ ಸೃಷ್ಟಿಸುವುದು ಬೇಡ. ಪುತ್ಥಳಿ ಸ್ಥಾಪನೆ ಆಗಲೇಬೇಕು ಎಂದಾದರೆ ಚನ್ನಯ್ಯರ ಪುತ್ಥಳಿ ನಿರ್ಮಿಸಲಿ. ನಂತರ ಕೆ.ಸಿ.ರೆಡ್ಡಿಯವರ ಪುತ್ಥಳಿ ಸ್ಥಾಪಿಸುವುದು ಸಾಮಾಜಿಕ ನ್ಯಾಯ’ ಎಂದು ಅಭಿಪ್ರಾಯಪಟ್ಟರು.

ಶ್ವೇತಪತ್ರ ಹೊರಡಿಸಿ: ‘ಬಂಬೂ ಬಜಾರ್‌ ಹಾಗೂ ಕ್ಲಾಕ್‌ಟವರ್ ಬಳಿಯ ಕುಂಟೆ, ಕಠಾರಿಪಾಳ್ಯದ ಬಿಂದುಮಾಳ್ಯಂ ಕಲ್ಯಾಣ ಮಂಟಪದ ಬಳಿಯಿದ್ದ ಹುಲ್ಲು ಮತ್ತು ಸೌದೆ ಮಾರುಕಟ್ಟೆ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಸಮಂಜಸವಲ್ಲ. ನಗರಸಭೆ ಆಸ್ತಿಗಳು ಒತ್ತುವರಿಯಾದರೂ ಕೇಳುವವರು ಇಲ್ಲ. ಸರ್ಕಾರಿ ಹಾಗೂ ನಗರಸಭೆ ಆಸ್ತಿಗಳನ್ನು ಗುರುತಿಸಿ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಚನ್ನಯ್ಯ ಅವರು ಕೋಲಾರದ ಸಂತೆ ಮೈದಾನಕ್ಕೆ ಜಾಗ ಮಂಜೂರು ಮಾಡಿಸಿದ್ದರು. ಆ ಜಾಗ ಈಗ ಬಹುತೇಕ ಒತ್ತುವರಿಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು. ನಗರಸಭೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಕೆಲ ಪಟ್ಟಭದ್ರರು ಕಬಳಿಸಿದ್ದಾರೆ. ನಗರಸಭೆ ಮತ್ತು ಸರ್ಕಾರಿ ಆಸ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT