ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೂ ಮುನ್ನ ನಂಜೇಗೌಡರಿಗೆ ಸಂಕಷ್ಟ

Last Updated 4 ನವೆಂಬರ್ 2022, 6:47 IST
ಅಕ್ಷರ ಗಾತ್ರ

ಕೋಲಾರ: ವಿಧಾನಸಭೆಯ ಚುನಾವಣೆ ಹತ್ತಿರವಿರುವಾಗಲೇ ಮಾಲೂರು ಕಾಂಗ್ರೆಸ್‌ ಕೆ.ವೈ. ನಂಜೇಗೌಡ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.

‘ಮಾಲೂರು ಕ್ಷೇತ್ರದ ದರಖಾಸ್ತು ಸಮಿತಿ ಅಧ್ಯಕ್ಷರಾದ ನಂಜೇಗೌಡರ ಅಧ್ಯಕ್ಷತೆಯಲ್ಲಿ ಒಂದೇ ತಿಂಗಳಿನಲ್ಲಿ 4 ಸಭೆ (2019ರ ಜುಲೈ 3, 8, 15, 26ನೇ ತಾರೀಖು) ನಡೆಸಿ ಸರ್ಕಾರಿ ಗೋಮಾಳಕ್ಕೆ ಸೇರಿದ ತಾಲ್ಲೂಕಿನ 80 ಎಕರೆಗೂ ಹೆಚ್ಚು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಎಂಬುವರು ಶಾಸಕ ಕೆ.ವೈ. ನಂಜೇಗೌಡ ಅವರ ವಿರುದ್ಧ ದೂರು ಸಲ್ಲಿಸಿದ್ದರು.

‘2022ರ ಆಗಸ್ಟ್‌ 30ರಂದು ಮಾಲೂರು ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ, ಠಾಣಾಧಿಕಾರಿ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಆಕ್ಷೇಪಿಸಿ ರಾಜಣ್ಣ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಖಾಸಗಿ ದೂರಿನ ಮೇರೆಗೆ ವಿಚಾರಣೆ ನಡೆಸಿದ್ದ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶೆ ಜೆ. ಪ್ರೀತ್‌, ‘ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಕಲಂ 156ರ (3) ಅನ್ವಯ ಈ ಪ್ರಕರಣ ತನಿಖೆಗೆ ಲಾಯಕ್ಕಾಗಿದೆ. ಆದ್ದರಿಂದ, ತನಿಖೆ ಕೈಗೊಂಡು ಡಿ. 7ಕ್ಕೆ ವರದಿ ಸಲ್ಲಿಸಿ’ ಎಂದು ಮಾಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ)–1860ರ ಕಲಂ 468 (ವಂಚಿಸುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ), 464 (ನಕಲಿ ದಾಖಲೆ ಸೃಷ್ಟಿ), 465 (ನಕಲಿ ದಾಖಲೆ ಸೃಷ್ಟಿಗೆ ದಂಡನೆ), 471ಬಿ (ಸುಳ್ಳು ಸೃಷ್ಟನೆಯ ದಾಖಲೆ ಅಥವಾ ಎಲೆಕ್ಟ್ರಾನಿಕ್‌ ದಾಖಲೆಯನ್ನು ನೈಜವಾದದ್ದು ಎಂದು ಬಳಸುವುದು), 420 (ವಂಚನೆ) ಮತ್ತು 120 (ಬಿ) (ಅಪರಾಧಿಕ ಒಳಸಂಚಿಗೆ ದಂಡನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT