ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು: ಮಾಜಿ ಸಂಸದೆ ಅಂಜು ಬಾಲಾ

ಕೊಲೆ ಯತ್ನ ಪ್ರಕರಣ ದಾಖಲಿಸಿ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸೂಚನೆ
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕೋಲಾರ: ‘ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು. ಅವರೇನಾದರೂ ಇಲ್ಲಿ ಇದ್ದಿದ್ದರೆ ನಾನೇ ಅವರನ್ನು ಒಳಗೆ ಇಳಿಸುತ್ತಿದ್ದೆ. ದಲಿತ ಮಕ್ಕಳ ಕೈಯಲ್ಲಿ ಇಂಥ ಕೆಲಸ ಮಾಡಿಸಿದವರಿಗೆ ಸ್ವಲ್ಪವೂ ನಾಚಿಕೆ, ಮಾನ ಮರ್ಯಾದೇ ಇಲ್ಲವೇ?’

– ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ, ಮಾಜಿ ಸಂಸದೆ ಅಂಜು ಬಾಲಾ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಶಾಲೆಯ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು. 

ಗುಂಡಿಯಲ್ಲಿ ಅಪಾಯಕಾರಿ ಅನಿಲವಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಮಕ್ಕಳ ಜೀವಕ್ಕೆ ಕುತ್ತು ಬರುತಿತ್ತು. ಇದೊಂದು ಅಮಾನವೀಯ ಘಟನೆ ಎಂದು ಅವರು ಗರಂ ಆದರು.

ಆರೋಪಿಗಳ ವಿರುದ್ಧ ತಕ್ಷಣ ಕೊಲೆ ಯತ್ನ ಪ್ರಕರಣ (ಐಪಿಸಿ 307) ದಾಖಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು. ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳನ್ನು 48 ಗಂಟೆಯಲ್ಲಿ ಬಂಧಿಸುವಂತೆ ತಾಕೀತು ಮಾಡಿದರು.

ಬೆಂಗಳೂರಿನ ಶಾಲೆಯೊಂದರಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣವನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಅಧಿಕಾರಿಗಳು ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಿದರೆ ಇಂಥ ಘಟನೆ ನಡೆಯಲ್ಲ. ವಿದ್ಯಾರ್ಥಿಗಳ ಪೋಷಕರು 15 ದಿನಗಳಿಗೊಮ್ಮೆಯಾದರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರೆ ಉತ್ತಮ. ಶಾಲೆಯಲ್ಲಿ ಅಂಬೇಡ್ಕರ್‌ ಫೋಟೊ ಹಾಕುವಂತೆ ಅವರು ಸೂಚಿಸಿದರು. 

‘ಹೊರಗುತ್ತಿಗೆ ನೌಕರರ ವಿರುದ್ಧ ಅಲ್ಲ; ಕಾಯಂ ನೌಕರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು. ಕೆಲಸದಿಂದ ವಜಾ ಮಾಡಿ’ ಎಂದು ಜೊತೆಯಲ್ಲಿದ್ದ ಆಯೋಗದ ನಿರ್ದೇಶಕ ಸುನಿಲ್‌ ಬಾಬು ನಿರ್ದೇಶನ ನೀಡಿದರು.

ಮಕ್ಕಳ ಜೊತೆ ಮುದ್ದೆ ಊಟ: ವಸತಿ ಶಾಲೆಯ ಆವರಣದಲ್ಲಿರುವ ಮಲದ ಗುಂಡಿ ವೀಕ್ಷಿಸಿದ ತಂಡ, ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ವಿಚಾರವನ್ನು ಮುಚ್ಚಿಡದೆ ವಿವರಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಮಕ್ಕಳನ್ನು ಕರೆದು ಸಮಸ್ಯೆ ಆಲಿಸಿದರು. 

ಭೋಜನ ಕೊಠಡಿಗೆ ಭೇಟಿ ನೀಡಿದ ತಂಡ ವಿದ್ಯಾರ್ಥಿಗಳ ಜೊತೆ ಕುಳಿತು ಮುದ್ದೆ ಊಟ ಮಾಡಿದರು. ಎಲೆಯ‌ಲ್ಲಿ ಬಡಿಸಲು ಹೋದಾಗ ಮಕ್ಕಳಿಗೆ ನೀಡುವ ತಟ್ಟೆಯನ್ನೇ ತಮಗೂ ನೀಡಿ ಎಂದು ಕೇಳಿ ಪಡೆದರು. ವಿದ್ಯಾರ್ಥಿನಿಯೊಬ್ಬಳಿಗೆ ಅಂಜು ಬಾಲಾ ತುತ್ತು ತಿನ್ನಿಸಿದರು. 

ಜಿಲ್ಲಾಧಿಕಾರಿ ಅಕ್ರಂ ಪಾಷ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಎಚ್‌.ಡಿ.ಆನಂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಕಾರ್ಯನಿರ್ವಾಹಕ ನಿರ್ದೇಶಕ ನವೀನ್‌ ಕುಮಾರ್‌ ರಾಜ್‌, ಸದಸ್ಯರ ಆಪ್ತ ಕಾರ್ಯದರ್ಶಿ ಬಿ.ಕೆ.ಭೋಲಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಅಂಜು ಬಾಲಾ ಶುಕ್ರವಾರ ಭೇಟಿ ನೀಡಿ ಮಲದ ಗುಂಡಿ ಪರಿಶೀಲಿಸಿದರು. ಸುನಿಲ್‌ ಬಾಬು ಅಕ್ರಂ ಪಾಷ ಎಂ.ನಾರಾಯಣ ನವೀನ್‌ ಕುಮಾರ್‌ ರಾಜು ಜೊತೆಗಿದ್ದರು
ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಅಂಜು ಬಾಲಾ ಶುಕ್ರವಾರ ಭೇಟಿ ನೀಡಿ ಮಲದ ಗುಂಡಿ ಪರಿಶೀಲಿಸಿದರು. ಸುನಿಲ್‌ ಬಾಬು ಅಕ್ರಂ ಪಾಷ ಎಂ.ನಾರಾಯಣ ನವೀನ್‌ ಕುಮಾರ್‌ ರಾಜು ಜೊತೆಗಿದ್ದರು

‘ದಲಿತರ ಶೋಷಣೆ ಇನ್ನೂ ನಿಂತಿಲ್ಲ’

‘ಮಾಧ್ಯಮಗಳಿಲ್ಲದಿದ್ದರೆ ಈ ಪ್ರಕರಣ ಹೊರಬರುತ್ತಿರಲಿಲ್ಲ. ಹೀಗಾಗಿ ನಾನು ಮೊದಲು ಮಾಧ್ಯಮಗಳನ್ನು ಅಭಿನಂದಿಸುತ್ತೇನೆ’ ಎಂದು ಅಂಜು ಬಾಲಾ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದಲಿತರ ಮೇಲೆ ನಡೆಯುತ್ತಿರುವ ಶೋಷಣೆ ಇನ್ನೂ ನಿಂತಿಲ್ಲ. ಇಂಥ ಘಟನೆ ನಡೆಯದಂತೆ ಎಲ್ಲಾ ಹಂತಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಇಲ್ಲಿ ಕೈಗೊಂಡ ಕ್ರಮ ಮತ್ತೊಂದು ಶಾಲೆಯಲ್ಲಿ ಸಂಭವಿಸಬಹುದಾದ ಅನಾಹುತ ತಡೆಯುತ್ತದೆ’ ಎಂದರು.

‘ಪದೇ ಪದೇ ಇಂಥ ಘಟನೆ ನಡೆದರೆ ಸರ್ಕಾರದ ವೈಫಲ್ಯವೆಂದೂ ಅಧಿಕಾರಿಗಳ ಮೇಲೆ ಹಿಡಿತವಿಲ್ಲವೆಂದೂ ಭಾವಿಸಬೇಕಾಗುತ್ತದೆ. ಸರ್ಕಾರ ಬದಲಾದಂತೆ ಅವರ ಮನಸ್ಥಿತಿಯೂ ಬದಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಯಾವುದೇ ಸರ್ಕಾರವಿರಲಿ; ಯಾರ ಮುಲಾಜಿನಲ್ಲೂ ಆಯೋಗ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ದಲಿತ ಮಕ್ಕಳ ಬಗ್ಗೆ ಭೇದಭಾವ ಮಾಡುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು ಏಳು ದಿನದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ
-ಅಂಜು ಬಾಲಾ, ಸದಸ್ಯೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT