ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ: ಸಮಗ್ರ ಶಿಕ್ಷಣ ಜಂಟಿ ನಿರ್ದೇಶಕ ರತ್ನಯ್ಯ ಹೇಳಿಕ

Last Updated 28 ಸೆಪ್ಟೆಂಬರ್ 2021, 14:34 IST
ಅಕ್ಷರ ಗಾತ್ರ

ಕೋಲಾರ: ‘ಶಾಲಾ ಮಕ್ಕಳಲ್ಲಿ ಜೀವನ ಕೌಶಲ ಹಾಗೂ ಸ್ವಾವಲಂಬಿ ಬದುಕು ರೂಪಿಸಲು ಅಗತ್ಯ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶ’ ಎಂದು ಸಮಗ್ರ ಶಿಕ್ಷಣ ಜಂಟಿ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೂರದೃಷ್ಟಿಯಿಂದ ತರಲಾಗಿದೆ. ಇದನ್ನು ಅಳವಡಿಸಿಕೊಂಡ ಪ್ರಥಮ ರಾಜ್ಯ ಕರ್ನಾಟಕವಾಗಿದ್ದು, ಮಕ್ಕಳಲ್ಲಿ ಕೌಶಲ ತುಂಬುವ ಮೂಲಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶವಿದೆ’ ಎಂದರು.

‘ರಾಜ್ಯದ 868 ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. 3 ವರ್ಷಗಳ ಬಾಲ್ಯಪೂರ್ವ ಶಿಕ್ಷಣ ಆರೈಕೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ. ಜಿಲ್ಲೆಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಸೂಚಿಸಿದರು.

‘ಆದರ್ಶ ಶಾಲೆಗಳು, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. 3 ವರ್ಷಗಳ ನರ್ಸರಿ ತರಬೇತಿ ಮಕ್ಕಳಿಗೆ ನೀಡುವುದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮಪಡಿಸುವುದು ಇಲಾಖೆಯ ಉದ್ದೇಶವಾಗಿದ್ದು, ಅನುಷ್ಠಾನಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಮಾರ್ಗಸೂಚಿ ಪಾಲಿಸಿ: ‘ಕೋವಿಡ್ ಸಂಕಷ್ಟದ ನಡುವೆ ಶಾಲೆಗಳು ಆರಂಭಗೊಂಡಿವೆ. ಪ್ರಾಥಮಿಕ ತರಗತಿ ಆರಂಭಕ್ಕೂ ಶೀಘ್ರವೇ ಅನುಮತಿ ಸಿಗುವ ಸಾಧ್ಯತೆಯಿದ್ದು, ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಜಲಜೀವನ ಮಿಷನ್ ಯೋಜನೆಯಡಿ ಶಾಲೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. 908 ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಚಿಲಿಪಿಲಿ ಕೈಪಿಡಿ ನೀಡಲಾಗಿದ್ದು, 3 ವರ್ಷದಿಂದ 6 ವರ್ಷದ ಮಕ್ಕಳಿಗೆ ನಾವೇ ಶಿಕ್ಷಣ ನೀಡುತ್ತೇವೆ. ಶಾಲೆಗಳಲ್ಲಿ ಕಲಿಕಾ ನಿರೀಕ್ಷಿತ ಫಲ ಪ್ರಕಟಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಶಿಕ್ಷಕರ ಜವಾಬ್ದಾರಿ’ ಎಂದರು.

‘ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು, ಈಗ ಆನ್‌ಲೈನ್ ಮೂಲಕವೇ ಮಕ್ಕಳ ಹಾಜರಾತಿ ದಾಖಲಿಸಬೇಕು. ವಿದ್ಯಾರ್ಥಿಗಳ ಪ್ರತಿ ಮಾಹಿತಿಯೂ ಸ್ಯಾಟ್ಸ್‌ನಲ್ಲಿ ದಾಖಲಾಗುತ್ತಿದ್ದು, ಶಿಕ್ಷಕರು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಸಂವಹನ ಕೌಶಲ ಬೆಳೆಸುವುದು ಕಡ್ಡಾಯವಾಗಿದ್ದು, ಶಾಶ್ವತ ಕಲಿಕೆಗೆ ಶಾಲೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ’ ಎಂದು ಹೇಳಿದರು.

ಶಾಲೆಯಲ್ಲಿ ಪರಿಶೀಲನೆ: ‘ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ಮಾರ್ಗಸೂಚಿ ಪಾಲನೆ ಸಂಬಂಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗುರುಸ್ಪಂದನಾ ಕಾರ್ಯಕ್ರಮದ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಕಚೇರಿಗೆ ಅಲೆದಾಟ ತಪ್ಪಿಸಲಾಗಿದೆ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಿಇಒಗಳಾದ ರಾಮಕೃಷ್ಣಪ್ಪ, ಕೆಂಪಯ್ಯ, ಚಂದ್ರಶೇಖರ್, ಕೃಷ್ಣಮೂರ್ತಿ, ಉಮಾದೇವಿ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT