ಮಂಗಳವಾರ, ಡಿಸೆಂಬರ್ 1, 2020
19 °C

ಮೌಲ್ಯವರ್ಧಿತ ತರಬೇತಿ ಅಗತ್ಯ: ಪಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಹಿಳೆಯರು ತರಬೇತಿ ಪಡೆಯುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡು ಉದ್ಯಮಶೀಲರಾಗಿ ಸ್ವಾವಲಂಬಿಗಳಾಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಕಿವಿಮಾತು ಹೇಳಿದರು.

ಗೋದ್ರೇಜ್ ವೃತ್ತಿ ಸಂಸ್ಥೆ ಹಾಗೂ ಕೌಶಲ ದರ್ಪಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಗುರುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಬ್ಯುಟಿಷಿಯನ್ ಮೌಲ್ಯವರ್ಧಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಈಗಾಗಲೇ ಉದ್ಯಮಶೀಲರಾಗಿರುವವರು ಕಾಲಕ್ಕೆ ತಕ್ಕಂತೆ ಮೌಲ್ಯವರ್ಧಿತ ತರಬೇತಿ ಪಡೆಯುವುದು ಅತ್ಯಗತ್ಯ’ ಎಂದರು.

‘ಜೀವನ ನಿರ್ವಹಣೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುತ್ತಾರೆ. ವೃತ್ತಿ ಕೌಶಲ ಅಭಿವೃದ್ಧಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು. ಜತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಸ್ವಉದ್ಯೋಗದಲ್ಲಿ ಕೌಶಲ ಅಳವಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ವೃತ್ತಿ ಉನ್ನತೀಕರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಕೆಲಸ ನಂಬಿ ಕೂರುವ ಕಾಲ ಹೊರಟು ಹೋಗಿದೆ. ಈಗ ಖಾಸಗಿ ಮತ್ತು ಸ್ವಉದ್ಯೋಗದಲ್ಲಿ ಸರ್ಕಾರಿ ಕೆಲಸಕ್ಕಿಂತ ಹೆಚ್ಚು ಆದಾಯ ಗಳಿಸಬಹುದು. ಮಹಿಳೆಯರು ಉದ್ಯೋಗಿನಿ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಶೀಲಾ ಹೇಳಿದರು.

‘ಹಾಲಿ ಉದ್ಯಮದಲ್ಲಿ ಮೌಲ್ಯವರ್ಧಿತ ಸೇವೆಗಳನ್ನು ಹೇಗೆ ರೂಢಿಸಿಕೊಳ್ಳಬಹುದು ಎಂಬುದನ್ನು ಅರಿಯಬೇಕು. ಸಂಸ್ಥೆಯು ನಡೆಸುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿಯ ಸದುಪಯೋಗ ಪಡೆಯಬೇಕು’ ಎಂದು ಕೌಶಲ ದರ್ಪಣ ಸಂಸ್ಥೆ ಅಧ್ಯಕ್ಷ ಗೋಪಿನಾಥ್ ಮನವಿ ಮಾಡಿದರು.

8 ಜಿಲ್ಲೆಯಲ್ಲಿ ತರಬೇತಿ: ‘ಸಂಸ್ಥೆಯು ಬ್ಯೂಟಿಷಿಯನ್ ಮೌಲ್ಯವರ್ಧಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಕೋಲಾರ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ನಡೆಸುತ್ತಿದೆ. ಕೋಲಾರ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದ 50 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೋವಿಡ್‌ ಕಾರಣಕ್ಕೆ ತರಬೇತಿ ತಡವಾಯಿತು’ ಎಂದು ಗೋದ್ರೇಜ್ ವೃತ್ತಿ ಸಂಸ್ಥೆ ಪ್ರತಿನಿಧಿ ತಾಸೀನಾ ವಿವರಿಸಿದರು.

ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಸ್ವಚ್ಛತಾ ಕಿಟ್ ಹಾಗೂ ವಿಮೆ ಬಾಂಡ್‌ ವಿತರಿಸಲಾಯಿತು. ದರ್ಪಣ ಸಂಸ್ಥೆ ಖಜಾಂಚಿ ಗೀತಾ, ಸಿಡಾಕ್ ಸಂಸ್ಥೆ ಪ್ರತಿನಿಧಿ ಅಜಿತ್, ಮಹಿಳಾ ಶಕ್ತಿ ಸಂಘದ ಸದಸ್ಯೆ ಲೇಖಾ, ಪರಿಸರವಾದಿ ಕೆ.ಎನ್.ತ್ಯಾಗರಾಜು, ಶಿಬಿರದ ಯೋಜನಾ ವ್ಯವಸ್ಥಾಪಕಿ ನಾಗಮಣಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.