ಮಂಗಳವಾರ, ಅಕ್ಟೋಬರ್ 22, 2019
21 °C
ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯ ಶ್ರೀಧರ ಹೇಳಿಕೆ

ವರ್ಷಾಂತ್ಯಕ್ಕೆ ನೂತನ ಶಿಕ್ಷಣ ನೀತಿ ಜಾರಿ

Published:
Updated:
Prajavani

ಕೋಲಾರ: ‘ಭಾರತ ದೇಶದ ಜ್ಞಾನ ಭಂಡಾರ, ಸ್ಥಾನಿಕ ವ್ಯವಸ್ಥೆ ಆಧಾರದಲ್ಲಿ ರೂಪುಗೊಂಡ ನೂತನ ಶಿಕ್ಷಣ ನೀತಿಯು ವರ್ಷದ ಅಂತ್ಯದೊಳಗೆ ಜಾರಿಯಾಗಲಿದೆ’ ಎಂದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯ ಎಂ.ಕೆ.ಶ್ರೀಧರ ಹೇಳಿದರು.

ಅಜಿತ ಸೇವಾ ಪ್ರತಿಷ್ಠಾನವು ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಮೌಲ್ಯ ಶಿಕ್ಷಣ ಕುರಿತು ಇಲ್ಲಿನ ಹೇಮಾದ್ರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಸುಮಾರು 170 ವರ್ಷದ ಹಿಂದಿನ ಮೆಕಾಲೆ ಶಿಕ್ಷಣ ಪದ್ಧತಿ ರದ್ದಾಗಲಿದೆ’ ಎಂದರು.

‘ದೇಶದಲ್ಲಿ 1986ರಲ್ಲಿ ಶಿಕ್ಷಣ ನೀತಿ ಜಾರಿಯಾಗಿತ್ತು. 33 ವರ್ಷದ ನಂತರ ಹೊಸ ಶಿಕ್ಷಣ ನೀತಿ ಬರುತ್ತಿದೆ. ಮುಂದಿನ 30 ವರ್ಷದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಮತ್ತು ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬುದನ್ನು ಹೊಸ ನೀತಿ ಒಳಗೊಂಡಿರುತ್ತದೆ. ಪ್ರಶಿಕ್ಷಣಾರ್ಧಿಗಳು ಹಿಂದಿನ ಶಿಕ್ಷಣ ಪದ್ದತಿಯಲ್ಲಿ ಕಲಿಯುತ್ತಿದ್ದಾರೆ. ಕೋರ್ಸ್ ಮುಗಿಯುವಷ್ಟರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿರುತ್ತದೆ. ಆ ನೀತಿಯ ಮಾರ್ಗದರ್ಶನದಲ್ಲಿ ಶಿಕ್ಷಕರು ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ನೂತನ ಶಿಕ್ಷಣ ನೀತಿ ಜಾರಿಯಾದ ನಂತರ ವಯಸ್ಸಿನ ಆಧಾರದಲ್ಲಿ ಶಿಕ್ಷಣ ನೀಡಲಾಗುವುದು. 3 ವರ್ಷದಿಂದ 18 ವರ್ಷದವರೆಗಿನ ಶಾಲಾ ಶಿಕ್ಷಣವನ್ನು 4 ಹಂತವಾಗಿ ವಿಂಗಡಿಸಲಾಗಿದೆ. ಈಗ ಪಠ್ಯಕ್ಕಷ್ಟೇ ಆದ್ಯತೆಯಿದೆ. ಪಠ್ಯೇತರ ಚುಟುವಟಿಕೆಗಳು ಶಾಲೆಯ ಬಾಗಿಲಿನಿಂದ ಹೊರಗೆ ಎಂಬ ಪರಿಸ್ಥಿತಿಯಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪಠ್ಯ ಮತ್ತು ಪಠ್ಯೇತರ ಎಂಬ ವ್ಯತ್ಯಾಸ ಇರುವುದಿಲ್ಲ’ ಎಂದು ವಿವರಿಸಿದರು.

‘11 ಮತ್ತು 12ನೇ ತರಗತಿಗೆ ಕಲೆ, ವಿಜ್ಞಾನ, ವಾಣಿಜ್ಯ, ಶೈಕ್ಷಣಿಕ, ವೃತ್ತಿಪರ ಕೋರ್ಸ್‌ಗಳೆಂಬ ವ್ಯತ್ಯಾಸ ತೆಗೆದುಹಾಕುವ ಮೂಲಸೂತ್ರ ಇಟ್ಟುಕೊಳ್ಳಲಾಗಿದೆ. ಪಠ್ಯಕ್ರಮ ಹೆಚ್ಚು ತುರುಕಬಾರದು. ಪಠ್ಯಕ್ರಮದ ಗಾತ್ರ ಜಾಸ್ತಿ ಮಾಡುವ ಬದಲು ಯಾವ ಹಂತದಲ್ಲಿ ಏನು ಬೇಕೋ ಅದನ್ನು ಜೀರ್ಣವಾಗಿಸಿಕೊಳ್ಳುವಂತಹ ಶಿಕ್ಷಣ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೋರ್ಸ್‌ ಆಯ್ಕೆ: ‘ಪದವಿ ಹಂತದಲ್ಲಿ ಕೆಲ ವಿಭಾಗ, ಸ್ನಾತಕೋತ್ತರ ಹಂತದಲ್ಲಿ ಕೋರ್ಸ್‌ಗಳ ಆಯ್ಕೆ ಹಾಗೂ ಪಿ.ಎಚ್‌ಡಿ ಹಂತದಲ್ಲಿ ಮತ್ತಷ್ಟು ಕೋರ್ಸ್‌ಗಳ ಆಯ್ಕೆಗೆ ಅವಕಾಶವಿರುತ್ತದೆ. ಈಗಿರುವಂತೆ ಬಿ.ಎ. ಬಿ.ಕಾಂ, ಬಿ.ಎಸ್ಸಿ ಪದವಿಯ ಬದಲು ಬಿ.ಎಲ್‍.ಎ ಎಂದು ಕರೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ನೂತನ ವ್ಯವಸ್ಥೆಯಲ್ಲಿ ಪದವಿ ಶಿಕ್ಷಣವು 3 ವರ್ಷದಿಂದ 4 ವರ್ಷಕ್ಕೆ ಏರಿಕೆಯಾಗಲಿದೆ. ಮೊದಲ ವರ್ಷ ಪೂರ್ಣಗೊಳಿಸಿದರೆ ಸರ್ಟಿಫಿಕೇಟ್, 2ನೇ ವರ್ಷಕ್ಕೆ ಡಿಪ್ಲೊಮಾ, 3ನೇ ವರ್ಷಕ್ಕೆ ಪದವಿ, 4ನೇ ವರ್ಷ ಕಡ್ಡಾಯವಲ್ಲ. 4 ವರ್ಷ ಪೂರ್ಣಗೊಳಿಸಿದವರಿಗೆ ಹಾನರ್ಸ್ ನೀಡಲಾಗುವುದು. ವಿದ್ಯಾರ್ಥಿ ಯಾವ ವರ್ಷವಾದರೂ ಕಲಿಕೆಗೆ ಸೇರಿ ಹೊರಗೆ ಬರಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಕಾಲೇಜುಗಳಿಗೆ ಸಂಪೂರ್ಣ ಸ್ವಾಯುತ್ತತೆ ಇರುತ್ತದೆ. ವಿಶ್ವವಿದ್ಯಾಲಯದ ಪಠ್ಯಕ್ರಮದ ಬದಲಾಗಿ ಸ್ಥಾನಿಕವಾಗಿ ಆಯಾ ಕಾಲೇಜುಗಳೇ ಪಠ್ಯ ನಿರ್ಧರಿಸಿ ಪರೀಕ್ಷೆ, ಮೌಲ್ಯಮಾಪನ ನಡೆಸಿ ಪದವಿ ನೀಡಲಿವೆ. ಸಂಶೋಧನೆ, ಸ್ನಾತಕೋತ್ತರ ಪದವಿಗಳನ್ನು ವಿ.ವಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಪರೀಕ್ಷೆ ಬದಲು ಮೌಲ್ಯಮಾಪನ ಎಂಬ ಪದ ಬಳಸಲಾಗಿದ್ದು, ಪರೀಕ್ಷೆ ವಿಧಾನ ಬದಲಾಗಲಿದೆ’ ಎಂದು ತಿಳಿಸಿದರು.

ಭಯ ಸಹಜ: ‘ಯಾವುದೇ ಹೊಸ ವ್ಯವಸ್ಥೆ ಹೊಸ ಸಂಶೋಧನೆ ಮಾಡುವಾಗ ಭಯ ಸಹಜ. ಅದರಂತೆ ಹೊಸ ಶಿಕ್ಷಣ ನೀತಿ ಬರುವ ಮುನ್ನವೇ ಬೇನೆಗೆ ಮದ್ದು ಅರೆಯಲು ಆಗುವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಭರವಸೆ ಇಟ್ಟುಕೊಂಡು ಐತಿಹಾಸಿಕ ಅವಕಾಶ ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಯಬೇಕು’ ಎಂದು ಶಿಕ್ಷಣ ತಜ್ಞ ಎ.ಆರ್.ನಾಗರಾಜು ಸಲಹೆ ನೀಡಿದರು.

‘170 ವರ್ಷಗಳ ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ನಾವಿದ್ದೇವೆ. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರ ಬದಲಾವಣೆ ಕಾಣಲಿದೆ. ಕಾಲಚಕ್ರ ಉರುಳಿದಂತೆ ಜಾಗತಿಕ ಪ್ರಪಂಚದಲ್ಲಿ ವೇಗದ ಜೀವನಕ್ಕೆ ಒಗ್ಗಿಕೊಂಡಿದ್ದೇವೆ. ಸಹಬಾಳ್ವೆ ಮತ್ತು ಸಮಾನತೆಯು ಸಂವಿಧಾನದ ಆಶಯಗಳಾಗಿವೆ. ಕೇಂದ್ರವು ಈ ಆಶಯ ಇಟ್ಟುಕೊಂಡು ನೂತನ ಶಿಕ್ಷಣ ನೀತಿ ಜಾರಿಗೊಳಿಸಲು ಮುಂದಾಗಿದೆ’ ಎಂದು ಹೇಮಾದ್ರಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್.ಬಿ.ಮುನಿವೆಂಕಟಪ್ಪ ಅಭಿಪ್ರಾಯಪಟ್ಟರು.

ಅಜಿತ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಶ್ರೀನಿವಾಸ್, ಸದಸ್ಯ ಸುಹಾಸ್, ಶಿಕ್ಷಣ ಪರಿಚಾರಕ ಭೀಮರಾವ್, ಹೇಮಾದ್ರಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಶೆಟ್ಟಿ, ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಡಾ.ಶಿವಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಮುರಳೀಧರ್ ಪಾಲ್ಗೊಂಡಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)