ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆಯಲ್ಲಿ ರಾಜಕೀಯ ಬೇಡ: ನಾಗಾನಂದ ಕೆಂಪರಾಜ್‌ ಸಲಹೆ

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾಗಾನಂದ ಕೆಂಪರಾಜ್‌ ಸಲಹೆ
Last Updated 12 ಏಪ್ರಿಲ್ 2021, 5:18 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಚಟುವಟಿಕೆಗೆ ಮೀಸಲಾದ ಸಂಸ್ಥೆ. ಪರಿಷತ್ತಿನ ಚುನಾವಣೆಯಲ್ಲಿ ಸ್ವಾರ್ಥ ಸಾಧನೆಗಾಗಿ ರಾಜಕೀಯ ತರುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ.ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭಾ ಕಚೇರಿ ಸಮೀಪ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸುವ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಿದ್ದೇನೆ. ಮತದಾರರು ಮತ ನೀಡುವ ಮೂಲಕ ನಾಡು, ನುಡಿ ಸೇವೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರು ವಿನಾಕಾರಣ ಆಧಾರರಹಿತ ಆಪಾದನೆ ಮಾಡಿದ್ದಾರೆ. ಭವನ ನಿರ್ಮಾಣ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ 1 ಎಕರೆ 8 ಗುಂಟೆ ಜಮೀನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಇದಕ್ಕೆ ಅಗತ್ಯವಾದ ದಾಖಲೆಗಳಿವೆ. ಟಿ. ಚನ್ನಯ್ಯ ರಂಗಮಂದಿರದಲ್ಲಿ ವಿಶಾಲ ಸಭಾಂಗಣದ ನೂತನ ಕಚೇರಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

‘ನನ್ನ ವೃತ್ತಿ ನಿರ್ವಹಣೆ ಕುರಿತು ಹಗುರವಾಗಿ ಮಾತನಾಡಿರುವುದು ಅವರ ಘನತೆಗೆ ತಕ್ಕ ನಡೆಯಲ್ಲ. 18 ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ನನ್ನ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ. ವೃತ್ತಿ ಮತ್ತು ಪ್ರವೃತ್ತಿಗಳಿಗೆ ಸಮಾನ ನ್ಯಾಯ ಒದಗಿಸಿದ್ದೇನೆ. ನಾಡು, ನುಡಿ ಸೇವೆ ಮಾಡಿದ ವ್ಯಕ್ತಿಗಳನ್ನು ವೈಯಕ್ತಿಕ ಕಾರಣಗಳಿಗಾಗಿ ಟೀಕಿಸುವುದು ಸರಿಯಲ್ಲ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾದರಿಯಾಗಿ ಕಾರ್ಯನಿರ್ವಹಿಸಿದೆ. ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಿಕೊಟ್ಟ ಗೌರವಕ್ಕೆ ಪಾತ್ರವಾಗಿದೆ. 5 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, 22 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು, 6 ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು, 5 ಗ್ರಾಮ ಪಂಚಾಯಿತಿ ಮಟ್ಟದ ಹಾಗೂ ಒಂದು ನಗರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಒಟ್ಟು 40 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್. ಕುಬೇರಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ದುರ್ಬಲ ಗೊಳಿಸುವ ಉದ್ದೇಶದಿಂದ ಉಪ ಸಂಘಟನೆಗಳನ್ನು ಹುಟ್ಟುಹಾಕಿದ ವ್ಯಕ್ತಿಗಳಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಕಸಾಪ ಸಂಪರ್ಕ ಕಳೆದುಕೊಂಡು ದಿಗ್ಬಂಧನ ಹಾಕಲಾಗಿದೆ ಎಂದು ಆಪಾದಿ ಸುವುದರಲ್ಲಿ ಅರ್ಥವಿಲ್ಲ ಎಂದರು.

ಲೇಖಕ ಕೆ.ವಿ. ನಾಗರಾಜ್ ಮಾತನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಲಪತಿ, ಗೋಪಿಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT