ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಗೋಮಾಳ ಜಮೀನಿಗೆ ಸಾಗುವಳಿ ಚೀಟಿ; ಟಿ.ಕುರುಬರಹಳ್ಳಿ ಗ್ರಾಮಸ್ಥರ ಆಕ್ಷೇಪ

Last Updated 10 ಸೆಪ್ಟೆಂಬರ್ 2021, 5:25 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಬೈರಕೂರು ಹೋಬಳಿಯ ಟಿ. ಕುರುಬರಹಳ್ಳಿಯಲ್ಲಿ ಕುರಿಗಾಹಿಗಳಿಗೆ ಸ.ನಂ. 36 ಮತ್ತು 37ರಲ್ಲಿ ಮೀಸಲಿಟ್ಟಿರುವ ಜಮೀನಿನ ಸಂಬಂಧ ದರಖಾಸ್ತು ಕಮಿಟಿಯಲ್ಲಿ ಯಾರಿಗೂ ಸಾಗುವಳಿ ಚೀಟಿ ನೀಡಬಾರದು ಎಂದು ಆಗ್ರಹಿಸಿ ಕುರಿಗಾಹಿಗಳು ಮತ್ತು ರೈತ ಸಂಘದಿಂದ ಗುರುವಾರ ತಾಲ್ಲೂಕು ಕಚೇರಿ ಮುಂದೆ ಕುರಿಗಳ ಸಮೇತ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕುರಿಗಾಹಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ಬಲಾಢ್ಯರಿಗೆ ಮಂಜೂರು ಮಾಡಿದರೆ ಭೂಮಿಗಾಗಿ ಹೋರಾಟ ನಡೆಸಲಾಗುವುದು ಎಂದು ಟಿ. ಕುರುಬರಹಳ್ಳಿ ಕುರಿಗಾಹಿಗಳು ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.

ಗ್ರಾಮದ ರಾಮಕೃಷ್ಣಪ್ಪ ಮತ್ತು ಚನ್ನರಾಯಪ್ಪ ಮಾತನಾಡಿ, ಗಡಿಭಾಗಕ್ಕೆ ಹೊಂದಿಕೊಂಡಿರವ ಟಿ. ಕುರುಬರಹಳ್ಳಿಯಲ್ಲಿ ಶೇ 80ರಷ್ಟು ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಜೀವನ ನಿರ್ವಹಣೆಗೆ ಕುರಿ ಮೇಯಿಸುವುದೇ ಅವರ ಕಾಯಕ. ಕುರಿಗಳ ಮೇವುಗಾಗಿ ಹತ್ತಾರು ವರ್ಷಗಳಿಂದ ತಾಲ್ಲೂಕು ಆಡಳಿತವನ್ನು ಗೋಮಾಳ ಜಮೀನು ಮೀಸಲಿಡುವಂತೆ ಒತ್ತಾಯಿಸಲಾಗುತ್ತಿದೆ. ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಜಮೀನು ಮಂಜೂರು ಮಾಡಿಲ್ಲ ಎಂದು ದೂರಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿ ಹಾಗೂ ಕುರಿಗಾಹಿಗಳಿಗೆ ಮೀಸಲಿಡಲು ತಾಲ್ಲೂಕು ಆಡಳಿತಕ್ಕೆ ವರ್ಷಾನುಗಟ್ಟಲೆ ಹುಡುಕಿದರೂ ಅಂಗೈಅಗಲ ಸರ್ಕಾರಿ ಜಮೀನು ಸಿಗುವುದಿಲ್ಲ. ಆದರೆ, ರಾತ್ರೋರಾತ್ರಿ ನಕಲಿ ದಾಖಲೆ ಸೃಷ್ಟಿಸಿ ಬಲಾಢ್ಯರು, ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಜಮೀನು ಮಂಜೂರು ಮಾಡುವ ದೊಡ್ಡ ಜಾಲವೇ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತದೆ ಎಂದು ಆರೋಪಿಸಿದರು.

ತಹಶೀಲ್ದಾರ್ ರಾಜಶೇಖರ್ ಮಾತನಾಡಿ, ‘ಯಾವುದೇ ಕಾರಣಕ್ಕೂ ಕುರಿಗಾಹಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ಮಂಜೂರು ಮಾಡುವುದಿಲ್ಲ. ದರಖಾಸ್ತು ಕಮಿಟಿಯಲ್ಲಿ ಸಂಪೂರ್ಣವಾಗಿ ಕಡತಗಳನ್ನು ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಪಾರೂಕ್‌ ಪಾಷ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಮೂರಂಡಹಳ್ಳಿ ಶಿವಾರೆಡ್ಡಿ, ವಿಜಯ್ಪಾಲ್, ವೇಣು, ನವೀನ್, ಕೇಶವ, ಹೆಬ್ಬಣಿ ಆನಂದರೆಡ್ಡಿ, ನಂಗಲಿ ಯುವ ಮುಖಂಡ ಕಿಶೋರ್, ಧರ್ಮ, ನಾಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT