ಶುಕ್ರವಾರ, ನವೆಂಬರ್ 22, 2019
23 °C

ಉತ್ತಮ ಸೇವೆಗೆ ಹೊಸ ಶಾಖೆ ಆರಂಭ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

Published:
Updated:
Prajavani

ಕೋಲಾರ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕ್‌ನ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ತಾಲ್ಲೂಕಿನ ನರಸಾಪುರದಲ್ಲಿ ಭಾನುವಾರ ನಡೆದ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ರೈತರನ್ನು ಬಡ್ಡಿ ಮುಕ್ತರಾಗಿ ಮಾಡಬೇಕು ಎಂಬುದು ಬ್ಯಾಂಕ್‌ನ ಗುರಿ. ಜಿಲ್ಲಾ ಕೇಂದ್ರದಲ್ಲಿ ಸೆ.27ರಂದು ಸೂಸೈಟಿಗಳ ಅಧ್ಯಕ್ಷರ ಸಭೆ ಕರೆಯಲಾಗಿದೆ’ ಎಂದರು.

‘ಡಿಸಿಸಿ ಬ್ಯಾಂಕನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವುದು ಆಡಳಿತ ಮಂಡಳಿಯ ಕನಸು. ಈ ಕನಸು ನನಸಾಗಿಸಲು ಸೊಸೈಟಿಗಳ ಅಧ್ಯಕ್ಷರು ಕೈಜೋಡಿಸಬೇಕು. ರೇಷ್ಮೆ, ಕೋಳಿ ಸಾಕಾಣಿಕೆ ಸೇರಿದಂತೆ ಗುಡಿ ಕೈಗಾರಿಕೆಗಳಿಗೆ ಸಾಲ ನೀಡಿ ದುಡಿಯುವ ಕೈಗಳನ್ನು ಬಲಪಡಿಸುತ್ತೇವೆ.

‘ಬಡ ಜನರು ಸಾಲಕ್ಕಾಗಿ ವಾಣಿಜ್ಯ ಬ್ಯಾಂಕ್‌ಗಳ ಮುಂದೆ ಭೀಕ್ಷುಕರಂತೆ ನಿಲ್ಲಬಾರದು. ಡಿಸಿಸಿ ಬ್ಯಾಂಕ್‌ನಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಮತ್ತು ರೈತರಿಗೆ ಸಾಲ ನೀಡಲಾಗುತ್ತದೆ. ಜತೆಗೆ ವರ್ಷಕ್ಕೆ ಶೇ 3ರ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರ ಜವಾಬ್ದಾರಿ: ‘ನರಸಾಪುರ ಸೊಸೈಟಿಯು ಸಿ.ಬೈರೇಗೌಡರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದೆ. ಸೊಸೈಟಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಕಿವಿಮಾತು ಹೇಳಿದರು.

‘ರೈತರಿಗೆ ಸಾಲ ನೀಡಲು ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವ ಹಣವನ್ನೇ ಸಾಲ ನೀಡಲಾಗುತ್ತಿದೆ. ರೈತರು ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಮತ್ತಷ್ಟು ಮಂದಿಗೆ ಸಾಲ ನೀಡಲು ಸಹಕರಿಸಬೇಕು’ ಎಂದು ಕೋರಿದರು.

ಮನೆ ಮಾತಾಗಿದೆ: ‘ಡಿಸಿಸಿ ಬ್ಯಾಂಕ್ ಅವಳಿ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಸಾಲಕ್ಕಾಗಿ ಡಿಸಿಸಿ ಬ್ಯಾಂಕ್‌ಗೆ ಬರುವ ರೈತರು, ಮಹಿಳೆಯರು ಉಳಿತಾಯದ ಹಣ ಠೇವಣಿ ಇಡಲು ಹಿಂದೇಟು ಹಾಕುತ್ತಾರೆ. ಬ್ಯಾಂಕ್‌ ಕೇವಲ ಸಾಲ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಸೊಸೈಟಿ ಅಧ್ಯಕ್ಷರು ಠೇವಣಿ ಮಾಡಿಸಲು ಒತ್ತು ನೀಡಬೇಕು’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಸೂಚಿಸಿದರು.

ನರಸಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮುನಿರಾಜು, ನಿರ್ದೇಶಕರಾದ ಎಸ್.ಸುರೇಶ್, ವಾಸುದೇವ, ಬಿ.ಎ.ಚನ್ನರಾಯಪ್ಪ, ನಾಗರಾಜು, ಎಂ.ಮೋಹನ್‌ಕುಮಾರ್, ಎನ್.ಚಂದ್ರಶೇಖರ್, ರಾಜಮ್ಮ, ರತ್ನಮ್ಮ, ಈರಯ್ಯ ಹಾಜರಿದ್ದರು.

ಪ್ರತಿಕ್ರಿಯಿಸಿ (+)