ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.5ಕ್ಕೆ ಕೇದಾರನಾಥ ದೇವಾಲಯ ಲೋಕಾರ್ಪಣೆ

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿಕೆ
Last Updated 1 ನವೆಂಬರ್ 2021, 13:17 IST
ಅಕ್ಷರ ಗಾತ್ರ

ಕೋಲಾರ: ‘ಅತಿವೃಷ್ಟಿ ಹಾಗೂ ಮೇಘ ಸ್ಫೋಟದಿಂದ ಹಾಳಾಗಿದ್ದ ಪವಿತ್ರ ಕೇದಾರನಾಥ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನ.5ರಂದು ಈ ದೇವಾಲಯವನ್ನು ಲೋಕಾರ್ಪಣೆ ಮಾಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದರು.

ಇಲ್ಲಿ ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ‘ಕೇದಾರನಾಥ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯ ಕೆಜಿಎಫ್‌ನ ಕೋಟಿ ಲಿಂಗೇಶ್ವರ ದೇವಾಲಯದಲ್ಲಿ ಅದೇ ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ರಾಜ್ಯದ ಪ್ರಮುಖ 12 ಶಿವಾಲಯಗಳಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ರೀತಿ ಜಿಲ್ಲೆಯ ಕೋಟಿಲಿಂಗೇಶ್ವರ ದೇವಾಲಯದ ಬಳಿ ಕಾರ್ಯಕ್ರಮ ಆಯೋಜನೆಗೆ ಪಕ್ಷ ಸೂಚನೆ ನೀಡಿದ್ದು, ಇದಕ್ಕೆ ಪಕ್ಷದ ಜಿಲ್ಲಾ ಸಮಿತಿ ಅಗತ್ಯ ಸಿದ್ಧತೆ ಮಾಡಬೇಕು’ ಎಂದು ಸೂಚಿಸಿದರು.

‘ಬೆಳಿಗ್ಗೆ 11ಕ್ಕೆ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದ್ದು, ಬೃಹತ್‌ ಎಲ್‌ಇಡಿ ಪರದೆಗಳ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ಹಾಗೂ ದೇಶದ ಪ್ರಗತಿ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ’ ಎಂದು ವಿವರಿಸಿದರು.

ಅಧಿಕಾರ ಶಾಶ್ವತವಲ್ಲ: ‘ಪ್ರಧಾನಿ ಮೋದಿ ಅವರು ದೇಶದಲ್ಲಿ ಹಿಂದೂ ಧರ್ಮ ಮತ್ತು ಹಿಂದುತ್ವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಲ್ಲ. ಮೋದಿ ದೇಶದ ಭವಿಷ್ಯಕ್ಕೆ ಹಿಂದೂ ಧರ್ಮ ಉಳಿಸಲು ಹೊರಟಿದ್ದಾರೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಮನವಿ ಮಾಡಿದರು.

‘ದೇಶದಲ್ಲಿ ಹಿಂದೂ ಧರ್ಮ ಉಳಿದರೆ ಮಾತ್ರ ನಾವೆಲ್ಲಾ ಉಳಿಯಲು ಸಾಧ್ಯ. ಕೇಸರಿ ಬಾವುಟ ಒಂದು ದಿನಕ್ಕೆ ಸೀಮಿತಗೊಳಿಸಬೇಡಿ. ಧರ್ಮದಲ್ಲಿ ಜಾತಿ ಹುಡುಕಿ ವ್ಯವಸ್ಥೆ ಕಲುಷಿತಗೊಳಿಸುವುದನ್ನು ಬಿಟ್ಟು ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿ. ಪ್ರಧಾನ ಮಂತ್ರಿಗಳ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕು’ ಎಂದು ಸೂಚನೆ ನೀಡಿದರು.

ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೇಶವಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್‌.ಬಿ.ಮುನಿವೆಂಕಟಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT