ಶುಕ್ರವಾರ, ಜುಲೈ 30, 2021
27 °C
ಜಿಲ್ಲಾ ಪಂಚಾಯಿತಿಗೆ ₹ 16.48 ಕೋಟಿ ಅನುದಾನ

ಕ್ರಿಯಾ ಯೋಜನೆಗೆ ಅಭಿಪ್ರಾಯ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆ, ಅನಿರ್ಬಂಧಿತ ಅನುದಾನ, 15ನೇ ಹಣಕಾಸು ಯೋಜನೆ ಸೇರಿದಂತೆ ₹ 16.48 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅವರು ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದರು.

ಕ್ರಿಯಾ ಯೋಜನೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿ.ಪಂ ಉಪ ಕಾರ್ಯದರ್ಶಿ, ‘ಸರ್ಕಾರ 2020-21ನೇ ಸಾಲಿಗೆ ಲಿಂಕ್ ಡಾಕ್ಯುಮೆಂಟ್ ಅಡಿ 11 ಇಲಾಖೆಗಳಿಗೆ ₹ 6.54 ಕೋಟಿ, ಅನಿರ್ಬಂಧಿತ ಅನುದಾನ ₹ 5.43 ಕೋಟಿ ಹಾಗೂ 15ನೇ ಹಣಕಾಸು ಯೋಜನೆಯಡಿ ₹ 4.51 ಕೋಟಿ ಒದಗಿಸಿದೆ’ ಎಂದು ಮಾಹಿತಿ ನೀಡಿದರು.

‘ಹಿಂದಿನ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಯ ₹ 7.54 ಕೋಟಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಈ ಹಣ ಬರುವ ಭರವಸೆ ಇದ್ದರೆ ಯೋಜನೆ ರೂಪಿಸಬಹುದು. ಇಲ್ಲವಾದಲ್ಲಿ ಬೇರೆ ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಬಹುದು’ ಎಂದು ತಿಳಿಸಿದರು.

‘ವಿವಿಧ ಇಲಾಖೆಯಲ್ಲಿ ಕಳೆದ ಸಾಲಿನಲ್ಲೇ ಕಾಮಗಾರಿ ಆಗಿವೆ. ಆದರೆ, ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರಿಗೆ ಕಷ್ಟವಾಗಿದೆ. ಗುತ್ತಿಗೆದಾರರಿಗೆ ಶೀಘ್ರವೇ ಬಿಲ್ ಪಾವತಿಸಬೇಕು. ಈ ಸಾಲಿನ ಹಣದಲ್ಲಿ ಬಿಲ್ ಪಾವತಿಸಿದರೆ ಮತ್ತೆ ಜಿಪಿಎಸ್ ಹಾಗೂ ತಾಂತ್ರಿಕ ಸಮಸ್ಯೆ ಎದುರಾಗುತ್ತವೆ. ಇದನ್ನು ಹೇಗೆ ಬಗೆಹರಿಸಬೇಕೆಂದು ಅಧಿಕಾರಿಗಳು ತಿಳಿಸಬೇಕು’ ಎಂದು ಅಧ್ಯಕ್ಷರು ಹೇಳಿದರು.

ಹೊಣೆ ಯಾರು?: ‘ಹಿಂದಿನ ವರ್ಷ ಹಣ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಇದಕ್ಕೆ ಯಾರು ಹೊಣೆ? ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಹುದ್ದೆ ವಿಚಾರದಲ್ಲಿ ವಿಳಂಬವಾಗಿದೆ. ಮಾರ್ಚ್‌ನಲ್ಲೇ ಸಲ್ಲಿಸಿದ್ದ ಬಿಲ್ ಕೂಡ ಪಾವತಿಯಾಗಿಲ್ಲ’ ಎಂದು ಜಿ.ಪಂ ಸದಸ್ಯ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

‘ಹಣ ವಾಪಸ್‌ ಹೋಗಿರುವ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆಯಾಗಿತ್ತು. ಆಗ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹಣ ವಾಪಸ್ ತರುವ ಜವಾಬ್ದಾರಿ ತಮ್ಮದು ಎಂದು ಸಿಇಒ ಹೇಳಿದ್ದರು. ಹೀಗಾಗಿ ಅವರೇ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಚರ್ಚಿಸಲಾಗಿದೆ: ‘ಅನುದಾನ ವಾಪಸ್‌ ತರುವ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್‌) ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾಗ ಈ ವಿಷಯ ಅವರ ಗಮನಕ್ಕೆ ತರಲಾಗಿತ್ತು. ಆಗ ಸಚಿವರು ಶೇ 50ರಷ್ಟು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು’ ಎಂದು ಮಾಹಿತಿ ನೀಡಿದರು.

‘2015-16ನೇ ಸಾಲಿನಲ್ಲಿ ಹಿಂದಿನ ವರ್ಷದ ಉಳಿಕೆ ಕೆಲಸಕ್ಕೆ ಹಣ ಮೀಸಲಿಟ್ಟು ನಂತರ ಹೊಸ ಕಾಮಗಾರಿ ನಡೆಸಲಾಗಿತ್ತು. ಅದೇ ಸರ್ಕಾರಕ್ಕೆ ವಾಪಸ್ ಹೋಗಿರುವ ಹಣಕ್ಕೆ ಈ ಸಾಲಿನ ಅನುದಾನ ಮೀಸಲಿಟ್ಟು ಉಳಿಕೆ ಹಣವನ್ನು ಆಯಾ ಸದಸ್ಯರಿಗೆ ಹಂಚಿಕೆ ಮಾಡಬೇಕು’ ಎಂದು ಜಿ.ಪಂ ಸದಸ್ಯ ಅರವಿಂದ್ ಒತ್ತಾಯಿಸಿದರು.

ಇದಕ್ಕೆ ಸದಸ್ಯ ಬಿ.ವಿ.ಮಹೇಶ್ ಹಾಗೂ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ‘ಕಾನೂನು ಪ್ರಕಾರ ಮಾಡಲು ಹೋದರೆ ಯಾವುದೂ ಊರ್ಜಿತ ಆಗುವುದಿಲ್ಲ. ಸದಸ್ಯರ ಕಾರಣದಿಂದ ಹಣ ವಾಪಸ್‌ ಹೋಗಿಲ್ಲ. ಅಧಿಕಾರಿಗಳ ಹಂತದಲ್ಲಿ ಈ ಲೋಪವಾಗಿದ್ದು, ಸರ್ಕಾರದಿಂದ ಹಣ ಬಂದಾಗ ಆ ಬಗ್ಗೆ ನಿರ್ಧಾರ ಮಾಡೋಣ. ಈಗ ಬಂದಿರುವ ಹಣವನ್ನು ಆಯಾ ಕ್ಷೇತ್ರದ ಸದಸ್ಯರಿಗೆ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಅಸಮಾಧಾನಗೊಂಡ ಅರವಿಂದ್, ‘ನನಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದಿದ್ದರೆ ಸಭೆಯೇ ಅಗತ್ಯವಿಲ್ಲ. ಸಾಮಾನ್ಯ ಸಭೆಯಲ್ಲೇ ತೀರ್ಮಾನ ಮಾಡೋಣ’ ಎಂದು ಸಭೆಯಿಂದ ನಿರ್ಗಮಿಸಲು ಮುಂದಾದರು. ಆಗ ಇತರೆ ಸದಸ್ಯರು ಅವರನ್ನು ಸಮಾಧಾನಪಡಿಸಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.