ಭಾನುವಾರ, ಜನವರಿ 23, 2022
27 °C

ಪ್ಯಾಕ್ಸ್‌ ಗಣಕೀಕರಣ: ಜ.15ರ ಗಡುವು- ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣ ವಿಳಂಬಕ್ಕೆ ಕಾರಣರಾದ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಜ.15ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು ನೀಡಿದರು.

ಪ್ಯಾಕ್ಸ್‌ಗಳ ಗಣಕೀಕರಣ ಸಂಬಂಧ ಇಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯ 193 ಸೊಸೈಟಿಗಳ ಪೈಕಿ 153ರ ಗಣಕೀಕರಣ ಮುಗಿದಿದೆ. ಇನ್ನೂ 40 ಸೊಸೈಟಿಗಳ ಗಣಕೀಕರಣ ಬಾಕಿಯಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಂತ್ರಿಕ ದೋಷದ ನೆಪ ಹೇಳಬೇಡಿ. ಸಂಪೂರ್ಣ ಗಣಕೀಕರಣದ ಮೂಲಕ ಪಾರದರ್ಶಕ ವಹಿವಾಟಿಗೆ ನಾಂದಿಯಾಡಿ. ಸಹಕಾರಿ ವ್ಯವಸ್ಥೆಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಹೊಸ ಮನ್ವಂತರದತ್ತ ಸಾಗಲು ಅಗತ್ಯ ಸಿಬ್ಬಂದಿ ನೇಮಿಸಿಕೊಂಡು ಗಣಕೀಕರಣ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

‘ಗಣಕೀಕರಣದ ಮೂಲಕ ಪ್ಯಾಕ್ಸ್‌ಗಳ ವಹಿವಾಟು ಆನ್‌ಲೈನ್‌ಗೆ ಬರಲಿದ್ದು, ಸೊಸೈಟಿಗಳಲ್ಲಿ ವಹಿವಾಟು ನಡೆಸಲು ರೈತರು ಮತ್ತು ಮಹಿಳೆಯರಿಗಿದ್ದ ಆತಂಕ ದೂರವಾಗಲಿದೆ. ವಹಿವಾಟು ನಡೆದ ಕ್ಷಣದಲ್ಲೇ ಮಾಹಿತಿ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗುವುದರಿಂದ ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಬಲಗೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ಯಾಕ್ಸ್‌ಗಳ ಪ್ರತಿ ವಹಿವಾಟಿನ ಮಾಹಿತಿ ಕ್ಷಣದಲ್ಲೇ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ತಲುಪುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಆಗುವುದಿಲ್ಲ. ಪ್ಯಾಕ್ಸ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪಕ್ಕೂ ಕಡಿವಾಣ ಬೀಳುತ್ತದೆ. ಅಲ್ಲಿನ ನೌಕರರು ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಮತ್ತು ಭ್ರಷ್ಟರಿದ್ದರೆ ಜಾಗ ಖಾಲಿ ಮಾಡುತ್ತಾರೆ’ ಎಂದರು.

‘ಗಣಕೀಕರಣ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದನ್ನು ಸಹಿಸುವುದಿಲ್ಲ. ಬ್ಯಾಂಕ್ ಕಡೆಯಿಂದಲೂ ಅಗತ್ಯ ಸಿಬ್ಬಂದಿ ನೀಡುತ್ತೇವೆ. ಅವರಿಗೂ ತರಬೇತಿ ಕೊಟ್ಟು ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಬ್ಯಾಂಕ್‌ನ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ವಿ-ಸಾಫ್ಟ್ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು