ಗುರುವಾರ , ಜನವರಿ 21, 2021
30 °C
ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಪ್ಯಾಕ್ಸ್‌ ಗಣಕೀಕರಣ: ಹೊಸ ವರ್ಷಕ್ಕೆ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣ ವ್ಯವಸ್ಥೆ 2021ರ ಜ.1ರಿಂದ ಗ್ರಾಹಕ ಸೇವೆಗೆ ಮುಕ್ತವಾಗಲಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಬ್ಯಾಂಕ್‌ನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ದೇಶದ ಸಹಕಾರಿ ವಲಯದ ಬ್ಯಾಂಕ್‌ಗಳಲ್ಲಿ ಒಡಿಶಾ ಹೊರತುಪಡಿಸಿದರೆ ಪ್ಯಾಕ್ಸ್‌ಗಳ ಗಣಕೀಕರಣದ ಸಾಹಸಕ್ಕೆ ಕೈಹಾಕಿರುವ ಮೊದಲ ಬ್ಯಾಂಕ್ ಕೋಲಾರ ಡಿಸಿಸಿ ಬ್ಯಾಂಕ್’ ಎಂದು ಸಂತಸ ವ್ಯಕ್ತಪಡಿಸಿದರು.

‘ಕಡತಗಳಿಂದ ಗಣಕೀಕರಣದ ಕಾಪಿರೈಟ್‌ ಮಾಡುವ ಮುನ್ನ ಸಮರ್ಪಕವಾಗಿ ಪರಿಶೀಲಿಸಿ ದಾಖಲು ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜನವರಿ ವೇಳೆಗೆ ಪರಿಪೂರ್ಣ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಮೈಕ್ರೊ ಎಟಿಎಂ ಸೇವೆಯೂ ಲಭ್ಯವಾಗಬೇಕು’ ಎಂದು ಸೂಚಿಸಿದರು.

‘ಗಣಕೀಕರಣದಿಂದಾಗಿ ಗ್ರಾಹಕರಲ್ಲಿ ಬ್ಯಾಂಕ್‌ ಬಗ್ಗೆ ನಂಬಿಕೆ ಬಲಗೊಳ್ಳುತ್ತದೆ. ಜತೆಗೆ ಭ್ರಷ್ಟಾಚಾರ ರಹಿತ ಪಾರದರ್ಶಕ ವಹಿವಾಟು ನಡೆಯಲಿದೆ. ಅಂದಿನ ಹಣಕಾಸು ವಹಿವಾಟಿನ ಲೆಕ್ಕ ಅಂದೇ ಆನ್‌ಲೈನ್‌ನಲ್ಲಿ ದಾಖಲಾಗಲಿದ್ದು, ಗ್ರಾಹಕ ಸೇವೆಯೂ ಉತ್ತಮಗೊಳ್ಳುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ಯಾಕ್ಸ್‌ಗಳ ಗಣಕೀಕರಣ ವ್ಯವಸ್ಥೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಜ್ಯದ ಸಹಕಾರಿ ಸಚಿವರು, ಸಹಕಾರಿ ವಲಯದ ದಿಗ್ಗಜರು, ಸಹಕಾರಿಗಳು ಭಾಗವಹಿಸಲಿದ್ದು, ಈ ಕಾರ್ಯಕ್ರಮ ಸಹಕಾರಿ ರಂಗದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ನ ಗುರಿ: ‘ವಸೂಲಾಗದ ಸಾಲ (ಎನ್‌ಪಿಎ) ಕಡಿಮೆ ಮಾಡುವುದು ಮತ್ತು ಠೇವಣಿ ಹೆಚ್ಚಳ ಮಾಡುವುದು ಬ್ಯಾಂಕ್‌ನ ಗುರಿ. ಪ್ರತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರತ್ಯೇಕವಾದ ಪಾಸ್ ಪುಸ್ತಕ ವಿತರಿಸಬೇಕು. ಜನರ ಬಳಿ ಪ್ರೀತಿ ಮತ್ತು ವಿಶ್ವಾಸದಿಂದ ಹೋದಾಗ ಮಾತ್ರ ಎಲ್ಲಾ ಕೆಲಸ ಸುಸೂತ್ರವಾಗಿ ನಿರ್ವಹಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

179 ಪ್ಯಾಕ್ಸ್‌ ಗಣಕೀಕರಣ: ‘ಕೋಲಾರ ಜಿಲ್ಲೆಯ 82 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 97 ಪ್ಯಾಕ್ಸ್‌ಗಳು ಗಣಕೀರಣ ಪ್ರಕ್ರಿಯೆ ಮುಗಿದಿದೆ. ಕೋಲಾರದ 4 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 8 ಪ್ಯಾಕ್ಸ್‌ಗಳ ಗಣಕೀಕರಣ ಅಂತಿಮ ಹಂತದಲ್ಲಿದೆ’ ಎಂದು ಡಿಸಿಸಿ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ವಿವರಿಸಿದರು.

‘ಬಾಕಿ ಇರುವ ಎಲ್ಲಾ ಪ್ಯಾಕ್ಸ್‌ಗಳ ಗಣಕೀಕರಣವನ್ನು ಡಿ.15ರೊಳಗೆ ಪೂರ್ಣಗೊಳಿಸಬೇಕು’ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ್ ಸೂಚಿಸಿದರು.

ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ನಾಗಿರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಎಂ.ರವಿ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿಬಂಧಕಿ ಜಿ.ಬಿ.ಶಾಂತಕುಮಾರಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.