ಸೋಮವಾರ, ಜುಲೈ 4, 2022
24 °C
ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ

ಜನರು ಸ್ವಪ್ರೇರಣೆಯಿಂದ ಲಸಿಕೆ ಪಡೆಯಿರಿ: ಜಿ.ಪಂ ಸಿಇಒ ಯುಕೇಶ್‌ಕುಮಾರ್‌ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಇಡೀ ವಿಶ್ವವನ್ನೇ ಬಾಧಿಸುತ್ತಿದ್ದು, ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಕೋವಿಡ್ ಲಸಿಕೆ ಪಡೆದುಕೊಂಡರೆ ಕೊರೊನಾ ನಿಯಂತ್ರಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್‌ ಕಿವಿಮಾತು ಹೇಳಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೋವಿಡ್‌ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಈಗ ಕೋವಿಡ್‌ 4ನೇ ಅಲೆಯ ಆತಂಕ ಎದುರಾಗಿದೆ. ಹೀಗಾಗಿ ಜನ ನಿರ್ಲಕ್ಷ್ಯ ತೋರದೆ ಕೋವಿಡ್‌ ತಡೆಗೆ ಸರ್ಕಾರದ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್ ಹೆಮ್ಮಾರಿಯಿಂದ ರಕ್ಷಣೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಬೇಕು. ಹೊರಗಿನಿಂದ ಮನೆಗೆ ಹೋದಾಗ ಸ್ಯಾನಿಟೈಸರ್‌ನಿಂದ ಕೈಗೊಳ್ಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
‘ಕೋವಿಡ್‌–19 ಜಾಗತಿಕವಾಗಿ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕೊರೊನಾ ಸೋಂಕಿನ ಹರಡುವಿಕೆ ತಡೆಗಾಗಿ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ಮೊದಲ ಮತ್ತು 2ನೇ ಡೋಸ್‌ ಪಡೆದಿರುವವರು 3ನೇ ಡೋಸ್‌ ಲಸಿಕೆ ಪಡೆಯಬೇಕು. ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಮಾರ್ಗಸೂಚಿ ಪಾಲಿಸಿ: ‘ಜನರು ಕೋವಿಡ್‍ಗೆ ಹೆದರದೆ ಅದರ ಜತೆಗೆ ಬದುಕುವ ವಿಧಾನ ಕಲಿಯಬೇಕು. ಕೋವಿಡ್‌ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ 4ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಜನರು ಈ ಆದೇಶ ‍ಪಾಲಿಸಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್‌ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹರಡುವಿಕೆ ತಡೆಯುವ ಕೆಲಸ ಮಾಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ತೋರದೆ ಕೂಡಲೇ ತಪಾಸಣೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ, ಯೋಜನಾ ನಿರ್ದೇಶಕಿ ಡಿ.ಸಿ.ಶೃತಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್, ಸಂಸ್ಥೆಯ ಜಿಲ್ಲಾ ಸಭಾಪತಿ ಎನ್.ಗೋಪಾಲಕೃಷ್ಣಗೌಡ, ಉಪ ಸಭಾಪತಿ ಆರ್.ಶ್ರೀನಿವಾಸನ್, ಕಾರ್ಯದರ್ಶಿ ಎಸ್.ನಂದೀಶ್‍ಕುಮಾರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು