ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬೇಸಿಗೆಗೆ ಬಸವಳಿದ ಜನ

ಮುಖ ತೋರಿಸಿ ಮರೆಯಾದ ವರುಣ: ಕಾದ ಹೆಂಚಾದ ಇಳೆ
Last Updated 27 ಮಾರ್ಚ್ 2022, 15:50 IST
ಅಕ್ಷರ ಗಾತ್ರ

ಕೋಲಾರ: ನೆತ್ತಿ ಮೇಲೆ ಸುಡು ಬಿಸಿಲು... ಕಾದ ಹೆಂಚಾಗಿರುವ ಇಳೆ... ಮುಖ ತೋರಿಸಿ ಮರೆಯಾದ ವರುಣ ದೇವ... ರಾತ್ರಿಯಲ್ಲೂ ಬಿಸಿಯ ಅನುಭವ... ಇದರ ನಡುವೆ ವಿದ್ಯುತ್‌ ಕಣ್ಣಾಮುಚ್ಚಾಲೆ...

ಜಿಲ್ಲೆಯಲ್ಲಿ ಈಗ ಬೇಸಿಗೆಯ ಬಿಸಿ ತೀವ್ರಗೊಂಡಿದೆ. ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಜನರು ಬಿರು ಬೇಸಿಗೆಯಿಂದ ಬಸವಳಿದಿದ್ದಾರೆ. ಬೆಳಿಗ್ಗೆಯಿಂದಲೇ ಆರಂಭವಾಗುವ ಸೆಕೆಯ ಅನುಭವ ಸಮಯ ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ. ಮರ ಗಿಡಗಳ ಕೆಳಗೂ ತಣ್ಣನೆಯ ಗಾಳಿ ಇಲ್ಲ. ಬೇಸಿಗೆಯಿಂದಾಗಿ ಫ್ಯಾನ್‌, ಹವಾ ನಿಯಂತ್ರಿತ ಉಪಕರಣ (ಎ.ಸಿ) ಹಾಗೂ ಏರ್‌ ಕೋಲರ್‌ಗಳಿಗೆ ದಿನವಿಡೀ ಕೆಲಸ.

ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ಗಣನೀಯವಾಗಿ ಹೆಚ್ಚಿದೆ. ಕೆರೆ ಕುಂಟೆ, ತೆರೆದ ಬಾವಿಗಳ ತುಂಬಾ ನೀರಿದ್ದರೂ ವಾತಾವರಣದಲ್ಲಿ ಉಷ್ಣತೆ ಪ್ರಮಾಣ ಏರಿಕೆಯಾಗಿದೆ. ಇದರ ಜತೆಗೆ ವಾಹನಗಳ ಹೊಗೆ, ರಸ್ತೆಯಲ್ಲಿನ ಧೂಳಿನಿಂದ ಜನಜೀವನ ಮತ್ತಷ್ಟು ಅಸಹನೀಯವಾಗಿದೆ.

ಬಿರು ಬೇಸಿಗೆಯಿಂದ ನೀರಡಿಕೆ ಹೆಚ್ಚಿದ್ದು, ಮಜ್ಜಿಗೆ, ಎಳನೀರು, ಐಸ್‌ಕ್ರೀಮ್‌, ಕಬ್ಬಿನ ಹಾಲು, ತಂಪು ಪಾನೀಯಗಳ ವಹಿವಾಟು ಜೋರಾಗಿದೆ. ಜನರು ಬಾಯಾರಿಕೆಯಿಂದ ಪಾರಾಗಲು ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ಸೌತೆಕಾಯಿ, ಮೋಸಂಬಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಮಜ್ಜಿಗೆ, ಎಳನೀರು, ಜ್ಯೂಸ್‌, ಐಸ್‌ಕ್ರೀಮ್‌, ಹಣ್ಣಿನ ಅಂಗಡಿಗಳಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ.

ಫ್ಯಾನ್‌, ಎ.ಸಿ ಹಾಗೂ ಏರ್‌ಕೋಲರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಎಲೆಕ್ಟ್ರಾನಿಕ್‌ ಉಪಕರಣ ಮಾರಾಟ ಮಳಿಗೆಗಳಲ್ಲಿ ಜನವೋ ಜನ. ನೈಸರ್ಗಿಕ ಫ್ರಿಡ್ಜ್‌ ಎಂದೇ ಹೆಸರಾಗಿರುವ ಮಡಿಕೆಗಳನ್ನು ಖರೀದಿಸಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಕುಡಿಯುವ ನೀರಿನ ಬಾಟಲಿಗಳ ವ್ಯಾಪಾರ ವೃದ್ಧಿಸಿದೆ. ಬಿಸಿಲಿನಿಂದ ಸಾಧ್ಯವಾದಷ್ಟು ಪಾರಾಗಲು ಮಹಿಳೆಯರು ತಲೆ ಮತ್ತು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ಬೆಲೆ ಏರಿಕೆ: ಬಿಸಿಲ ತಾಪ ಹೆಚ್ಚಿದಂತೆ ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿಗೆ ₹ 18ಕ್ಕೆ ಜಗಿದಿದೆ. ಅದೇ ರೀತಿ ದ್ರಾಕ್ಷಿ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಬಿಳಿ ದ್ರಾಕ್ಷಿ ಕೆ.ಜಿಗೆ ₹ 100, ಕಪ್ಪು ದ್ರಾಕ್ಷಿ ₹ 200, ಮೋಸಂಬಿ ₹ 60ರಿಂದ ₹ 80, ಕಿತ್ತಳೆ ಹಣ್ಣಿನ ಬೆಲೆ ₹ 60ರಿಂದ ₹ 100ಕ್ಕೆ, ಮೋಸಂಬಿ ಹಣ್ಣಿನ ಬೆಲೆ ₹ 60ರಿಂದ ₹ 90ಕ್ಕೆ ಜಿಗಿದಿದೆ. ಮತ್ತೊಂದೆಡೆ ತರಕಾರಿ, ಸೊಪ್ಪುಗಳ ಬೆಲೆ ಗಗನಕ್ಕೇರಿದೆ. ಮೆಂತ್ಯಾ ಸೊಪ್ಪು ಒಂದು ಕಟ್ಟಿಗೆ ₹ 25, ದಂಟು ಸೊಪ್ಪು ₹ 20ಕ್ಕೆ ಏರಿದೆ.

ಎರಡೂವರೆ ತಿಂಗಳು: ಹೋಟೆಲ್‌ಗಳಲ್ಲಿ ಮೊಸರನ್ನಕ್ಕೆ ಬೇಡಿಕೆ ಹೆಚ್ಚಿದೆ. ಬಸ್‌ ಮತ್ತು ರೈಲು ನಿಲ್ದಾಣದ ಬಳಿ, ಪಾದಚಾರಿ ಮಾರ್ಗದಲ್ಲಿ, ಪ್ರಮುಖ ರಸ್ತೆಗಳ ಅಕ್ಕಪಕ್ಕ, ಮಾರುಕಟ್ಟೆಗಳ ಸಮೀಪ ಹಾಗೂ ಸರ್ಕಾರಿ ಕಚೇರಿಗಳ ಬಳಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಮನೆಗಳಲ್ಲಿ ಟೀ ಕಾಫಿಯ ಬದಲಿಗೆ ನಿಂಬೆ ಹಣ್ಣಿನ ಜ್ಯೂಸ್‌, ಪಾನಕ, ಮಜ್ಜಿಗೆ ಸೇವನೆ ಹೆಚ್ಚಿದೆ. ಮೇ ಅಂತ್ಯದವರೆಗೂ ಬೇಸಿಗೆ ಮುಂದುವರಿಯಲಿದ್ದು, ನಗರವಾಸಿಗಳು ಇನ್ನೂ ಎರಡೂವರೆ ತಿಂಗಳು ಬೇಸಿಗೆಯ ಬಿಸಿ ಅನುಭವಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT