ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಶಿಕ್ಷಕ ವೃತ್ತಿ ತೊರೆದು ಕೃಷಿಯಲ್ಲಿ ಯಶಸ್ಸು ಕಂಡ ಯುವಕ

ಮಿಶ್ರ ಬೆಳೆ ಬೆಳೆದು ಮಾದರಿಯಾದ ರೈತ
Published 4 ಜುಲೈ 2024, 6:40 IST
Last Updated 4 ಜುಲೈ 2024, 6:40 IST
ಅಕ್ಷರ ಗಾತ್ರ

ಮುಳಬಾಗಿಲು: ಉಪನ್ಯಾಸಕನಾಗಿ ಹೆಸರು ಮಾಡಬೇಕೆಂದು ಬೆಂಗಳೂರಿನ ನಾನಾ ಶಾಲಾ–ಕಾಲೇಜುಗಳಲ್ಲಿ ವೃತ್ತಿ ಮಾಡಿ, ಕೊನೆಗೆ ವೃತ್ತಿಯನ್ನೇ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದವರು ರೈತ ಎನ್. ನರೇಶ್.

ಮುಳಬಾಗಿಲು ತಾಲ್ಲೂಕಿನ ಎಚ್. ಗೊಲ್ಲಹಳ್ಳಿ ಗ್ರಾಮದ ನರೇಶ್, ಉಪನ್ಯಾಸಕ ವೃತ್ತಿಯ ಅಲ್ಪವೇತನದಲ್ಲಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಕಷ್ಟ ಎಂದು ತಿಳಿದು ಕೃಷಿಯಲ್ಲಿ ತೊಡಗಿಸಿಕೊಂಡವರು. ನಾಲ್ಕು ಎಕರೆ ಜಮೀನಿನಲ್ಲಿ ಅಪ್ಪನಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದ ನರೇಶ್‌ ನಂತರ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅದರಲ್ಲಿ ಯಶಸ್ಸು ಕಂಡು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.

ಜಮೀನಿನಲ್ಲಿ ಒಂದೇ ಬೆಳೆ ಬೆಳೆಯದೆ ಏಕಕಾಲದಲ್ಲಿ ಐದಾರು ಬೆಳೆಗಳನ್ನು ಬೆಳೆದು ಒಂದರಲ್ಲಿ ನಷ್ಟವಾದರೂ ಮತ್ತೊಂದರಲ್ಲಿ ಲಾಭ ಗಳಿಸಬಹುದು ಎಂಬ ತತ್ವ ಅಳವಡಿಸಿಕೊಂಡಿದ್ದಾರೆ. ಒಂದು ಎಕರೆಯಲ್ಲಿ ಟೊಮೆಟೊ, ಉಳಿದ ಮೂರು ಎಕರೆಯಲ್ಲಿ ಚಪ್ಪರದವರೆಕಾಯಿ (ಚಿಕ್ಕಡಿ), ಮೆಣಸಿನಕಾಯಿ, ಬೀನ್ಸ್, ಅಲಸಂದೆ, ಕೊತ್ತಂಬರಿ, ಸೇವಂತಿ ಹೂ, ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಈ ವರ್ಷದಲ್ಲಿ ಸುಮಾರು ₹15 ಲಕ್ಷ ಲಾಭ ಗಳಿಸಿದ್ದಾರೆ.

ಈ ಬಾರಿ ಎಲ್ಲಾ ಬೆಲೆಗಳಿಗೂ ಬಂಪರ್ ಬೆಲೆ: ಈಗಾಗಲೇ ಸುಮಾರು ಒಂದು ವರ್ಷದಿಂದ ಮೆಣಸಿನಕಾಯಿ, ಕೊತ್ತಂಬರಿ, ಬೀನ್ಸ್, ಅಲಸಂದೆಗೆ ಉತ್ತಮ ಬೆಲೆ ಸಿಕ್ಕಿದ್ದು, ₹ 8 ಲಕ್ಷ ಲಾಭ ಗಳಿಸಿದ್ದಾರೆ. ಸೇವಂತಿ ಹೂ ಸಹ ಕೊಯ್ಲಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ಉತ್ತಮ ಲಾಭ ನಿರೀಕ್ಷೆಯಲ್ಲಿದ್ದಾರೆ.

ಟೊಮೆಟೊಗೆ ಉತ್ತಮ ಬೆಲೆ: ಎಂಟು ಸಾವಿರ ಟೊಮೆಟೊ ಮೊಳಕೆ ನಾಟಿ ಮಾಡಿದ್ದು, ಟೊಮೆಟೊ ಕೊಯ್ಲಿಗೆ ಬಂದಿದೆ. ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಟೊಮೆಟೊ ಬಾಕ್ಸ್ ಸುಮಾರು ₹700ರಿಂದ ₹900ಕ್ಕೆ ಮಾರಾಟವಾಗುತ್ತಿದೆ. ಇದರಿಂದ ₹10 ಲಕ್ಷ ಲಾಭ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ನರೇಶ್‌.

ನರೇಶ್‌ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ದಿನಕ್ಕೆ 30 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾ ಉತ್ತಮ ಹಣ ಸಂಪಾದನೆ ಮಾಡುತ್ತಿದ್ದಾರೆ. ಜತೆಗೆ ಸ್ವಲ್ಪ ಜಾಗದಲ್ಲಿ ಮನೆಗೆ ಬೇಕಾದ ಸೊಪ್ಪು, ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ರೈತರು ಒಂದೇ ಬೆಳೆಗೆ ಜೋತು ಬಿದ್ದು ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಗಾಗಿ ಮಿಶ್ರ ಬೆಳೆ ಬೆಳೆದರೆ ಒಂದರಲ್ಲಾದರೂ ಲಾಭ ಸಿಗುತ್ತದೆಎನ್.
ನರೇಶ್, ರೈತ, ಎಚ್.ಗೊಲ್ಲಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT