ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಓದಿನಿಂದ ವ್ಯಕ್ತಿತ್ವ ವಿಕಸನ

ಸಾಹಿತಿ ಬಾಬು ಕೃಷ್ಣಮೂರ್ತಿ ಅಭಿಪ್ರಾಯ
Last Updated 22 ಆಗಸ್ಟ್ 2019, 15:37 IST
ಅಕ್ಷರ ಗಾತ್ರ

ಕೋಲಾರ: ‘ಸಾಹಿತ್ಯ ಓದುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ. ಆದರೆ, ಯುವಕ ಯುವತಿಯರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ’ ಎಂದು ಸಾಹಿತಿ ಬಾಬು ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದರು.

ಅಜಿತ್ ಸೇವಾ ಪ್ರತಿಷ್ಠಾನವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೇಖಕ ಬಿ.ಎನ್.ಶ್ರೀನಿವಾಸನ್‌ ನೆನಪಿನ ಪುಸ್ತಕ ಭಂಡಾರ ಲೋಕಾರ್ಪಣೆ ಮಾಡಿ ಮಾತನಾಡಿ, ‘ಓದು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಏಣಿ ಇದ್ದಂತೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿನ ಕಾಲದಲ್ಲಿ ಓದುವಾಗ ಇದ್ದ ವಾತಾವರಣ ಬೇರೆ. ಆಗ ಟಿ.ವಿ, ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಪುಸ್ತಕ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಇರಲಿಲ್ಲ. ಗ್ರಂಥಾಲಯಕ್ಕೆ ಹೋಗಿ ಓದುತ್ತಿದ್ದೆವು. ಇದು ಸಾಹಿತ್ಯದ ಬಗೆಗೆ ಒಲವು ಮೂಡಲು ಕಾರಣವಾಯಿತು. ಇಂದು ಶುದ್ಧ ವಾತಾವರಣ ಕಲುಷಿತವಾಗಿದೆ’ ಎಂದು ವಿಷಾದಿಸಿದರು.

‘ಮಕ್ಕಳು ಗ್ರಂಥಾಲಯ ಬಳಸಿಕೊಂಡು ಜ್ಞಾನ ಸಂಪಾದಿಸಬೇಕು. ಗ್ರಂಥಾಲಯಗಳಲ್ಲಿ ಮಕ್ಕಳು ಓದುವಂತಹ ಪುಸ್ತಕ ಇಟ್ಟು ಓದಿಗೆ ಉತ್ತೇಜನ ನೀಡಬೇಕು. ಮಕ್ಕಳ ಕಥೆಗಳು, ಸಣ್ಣ ಕಥೆಗಳು, ನೀತಿ ಕಥೆಗಳು ಪ್ರಮೋದ ಸಾಹಿತ್ಯವಾಗಿ ಓದುಗರ ಮನಸ್ಸಿಗೆ ಮುದ ನೀಡುತ್ತವೆ. ಭಗವದ್ಗೀತೆ, ರಾಮಾಯಣ, ಮಹಾಭಾರತವು ಪ್ರಬೋಧ ಸಾಹಿತ್ಯವಾಗಿದ್ದು, ಮನುಷ್ಯನನ್ನು ಸತ್ಪ್ರಜೆಯಾಗಿ ಮಾಡುತ್ತವೆ’ ಎಂದರು.

‘ಬಿ.ಎನ್.ಶ್ರೀನಿವಾಸನ್ ಜತೆಗೆ ನನ್ನದು 4 ವರ್ಷದ ಪರಿಷಯವಷ್ಟೇ. ಆದರೆ, ಅವರೊಂದಿಗೆ ಮಾತನಾಡುವಾಗ ಅವರ ಚಿಂತನೆ, ವೈಚಾರಿಕತೆ, ಯೋಚನೆಗಳಲ್ಲಿ ಹೊಸ ಬೆಳಕು ಸಿಗುತ್ತಿತ್ತು. ಮೊಸರು ಕಡೆದಾಗ ಸಿಗುವ ನವನೀತದಂತೆ ಅವರ ಚಿಂತನ ಮಂಥನದಿಂದ ಹೊರಹೊಮ್ಮುತ್ತಿದ್ದ ವಿಚಾರಧಾರೆ ಅರ್ಥಗರ್ಭಿತವಾಗಿತ್ತು’ ಎಂದು ಸ್ಮರಿಸಿದರು.

ಶ್ರೇಷ್ಠ ಕೃತಿಗಳು: ‘ಆದಿಕವಿ ಪಂಪ ಬರೆದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳು ಅತ್ಯಂತ ಶ್ರೇಷ್ಠ ಕೃತಿಗಳಾಗಿವೆ. ವಿದ್ಯಾದೇವಿ ಸರಸ್ವತಿ ಕುರಿತ ವರ್ಣನೆ ಈ ಕೃತಿಗಳಲ್ಲಿದೆ. ಅಂತೆಯೇ ಬಿ.ಎನ್.ಶ್ರೀನಿವಾಸನ್‌ ಸರಸ್ವತಿಯನ್ನು ಮಸ್ತಕಕ್ಕೇರಿಸಿಕೊಂಡ ಚತುರರಾಗಿದ್ದರು. ಅತ್ಯಂತ ಸೂಕ್ಷ್ಮ ಮನಸ್ಸಿನ ಅವರಿಗೆ ಯಾವುದೇ ವಿಚಾರವಾಗಿ ಮಾತನಾಡುವ ಸಾಮರ್ಥ್ಯವಿತ್ತು’ ಎಂದು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ಆರ್.ನರಸಿಂಹನ್ ಹೇಳಿದರು.

‘ಪ್ರತಿಷ್ಠಾನದಿಂದ ಸೇವಾ ಚಟುವಟಿಕೆ ನಿರ್ವಹಿಸಲು ಸದಾ ಸಿದ್ಧ’ ಎಂದು ಅಜಿತ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದರು.

ಹರಿಕೃಷ್ಣ ಮತ್ತು ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಕೇರಳದ ಕೊಲ್ಲಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ವಿವೇಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT