ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಬು ತುಂಬಿಸಿದ ತಾರಸಿ ತೋಟ

Last Updated 8 ಜೂನ್ 2020, 10:38 IST
ಅಕ್ಷರ ಗಾತ್ರ

ಕೋಲಾರ: ಕೋಲಾರದ ಕನಕನಪಾಳ್ಯದ ನಿವಾಸಿ ಶಿವಣ್ಣ ಅವರು ತಮ್ಮ ಮನೆಯ ತಾರಸಿಯಲ್ಲಿ ವಿವಿಧ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದು ಹೆಚ್ಚು ಆದಾಯ ಗಳಿಸುವ ಮೂಲಕ ನಗರವಾಸಿಗಳಿಗೆ ಮಾದರಿಯಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ತಾರಸಿ ತೋಟಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಮುಖ್ಯವಾಗಿ ನಗರ ಪ್ರದೇಶದಲ್ಲಿ ತಾರಸಿ ತೋಟಕ್ಕೆ ಹೆಚ್ಚಿನ ಮನ್ನಣೆ ಇದೆ. ತಾರಸಿ ತೋಟ ಮಾಡುವುದರಿಂದ ಒಂದು ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಮನೆಯಲ್ಲೇ ಬೆಳೆದುಕೊಳ್ಳಬಹುದು.

ತಾರಸಿ ತೋಟಗಳಲ್ಲಿ ಬೆಳೆಯಲಾಗುವ ಹಣ್ಣು, ತರಕಾರಿಗಳನ್ನು ಮನೆಯಲ್ಲಿ ಬಳಕೆ ಮಾಡುವುದರಿಂದ ಅಪೌಷ್ಟಿಕತೆ ನಿವಾರಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಮನೆಯ ಬಳಕೆಗೆ ಸಾಕಾಗಿ ಉಳಿಯುವ ಹೆಚ್ಚುವರಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಿ ಆದಾಯ ಗಳಿಸಬಹುದು.

ಕನಕಪಾಳ್ಯ ನಿವಾಸಿ ಶಿವಣ್ಣ ಅವರು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಮನೆಯ ತಾರಸಿಯಲ್ಲೇ ಚಿಕ್ಕ ಕೈತೋಟ ಮಾಡಿ ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ, ನುಗ್ಗೆಕಾಯಿ, ಹಸಿರು ಸೊಪ್ಪುಗಳು, ಕುಂಬಳ ಜಾತಿಯ ಗಿಡಗಳು ಮತ್ತು ದ್ರಾಕ್ಷಿ, ಪಪ್ಪಾಯ ಬೆಳೆದಿದ್ದಾರೆ.

ಹೂವಿನ ಬೆಳೆಯಾದ ಕಣಗಿಲೆ, ಗುಲಾಬಿ ಮತ್ತು ಮಲ್ಲಿಗೆ, ಔಷಧೀಯ ಸಸ್ಯಗಳು ಇವರ ತಾರಸಿ ತೋಟದ ಅಂದ ಹೆಚ್ಚಿಸಿವೆ. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಶಿವಣ್ಣ ಅವರಿಗೆ ಡ್ರಾಗನ್ ಹಣ್ಣಿನ ಸಸಿ ವಿತರಿಸಲಾಗಿದೆ. ಡ್ರಾಗನ್ ಹಣ್ಣಿನ ಬೆಳೆಯಲ್ಲಿ ಉತ್ತಮ ಫಸಲು ತೆಗೆದು ಹೆಚ್ಚಿನ ಆದಾಯ ಗಳಿಸುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.

‘ಶಿವಣ್ಣ ಅವರಿಗೆ ತಾರಸಿ ತೋಟ ನಿರ್ವಹಣೆಯು ಹವ್ಯಾಸವಾಗಿದೆ. ತಾರಸಿ ತೋಟದ ಬೆಳೆಯಲಾದ ಹಣ್ಣು ಮತ್ತು ತರಕಾರಿಗಳನ್ನು ಮನೆಗೆ ಬಳಕೆ ಮಾಡುತ್ತಾರೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಎಸ್‌.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಸಗೊಬ್ಬರ ಕೊಳ್ಳುವುದಿಲ್ಲ: ತಾರಸಿ ತೋಟದ ಬೆಳೆಗಳಿಗೆ ಅಂಗಡಿಯಿಂದ ರಸಗೊಬ್ಬರ ಕೊಳ್ಳುವುದಿಲ್ಲ. ಬದಲಿಗೆ ಮನೆಯ ತರಕಾರಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರು ಮಾಡಿ ಗಿಡಗಳಿಗೆ ಹಾಕುತ್ತಾರೆ. ನೀರಿನ ನಿರ್ವಹಣೆಗೆ ಒತ್ತು ಕೊಟ್ಟಿರುವ ಇವರು ಮಳೆಗಾಲದಲ್ಲಿ ಮಾಳಿಗೆಯ ಮೇಲೆ ಬೀಳುವ ಮಳೆ ನೀರನ್ನು ಪೈಪ್‌ ಮೂಲಕ ಟ್ಯಾಂಕ್‌ಗೆ ತುಂಬಿಸಿ ಬೇಸಿಗೆಯಲ್ಲಿ ಬೆಳೆಗಳಿಗೆ ಬಳಕೆ ಮಾಡುತ್ತಾರೆ.

ಕೈತೋಟದ ಜತೆಗೆ ಸದ್ದಿಲ್ಲದೆ ಜೇನು ಸಾಕಣೆಯು ನಡೆದಿದೆ. ತಾರಸಿಯಲ್ಲಿ 3 ಜೇನು ಪೆಟ್ಟಿಗೆ ಇಟ್ಟು ಲಾಭ ಗಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT