ಸೋಮವಾರ, ಅಕ್ಟೋಬರ್ 21, 2019
25 °C
ಬಾಲಕಿ ಮೇಲೆ ಅತ್ಯಾಚಾರ: ಕಲ್ಲು ತೂರಿ ಪರಾರಿಯಾಗಲು ಯತ್ನ

ಅತ್ಯಾಚಾರ ಆರೋಪಿಗೆ ಪೊಲೀಸರ ಗುಂಡೇಟು

Published:
Updated:
Prajavani

ಕೆಜಿಎಫ್: ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲೆತ್ನಿಸಿದ ಅತ್ಯಾಚಾರ ಪ್ರಕರಣದ ಆರೋಪಿ ಕುಟ್ಟಿ ಉರುಫ್‌ ತಮಿಳರಸನ್‌ (26) ಎಂಬಾತನ ಮೇಲೆ ರಾಬರ್ಟ್‌ಸನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಸೂರ್ಯಪ್ರಕಾಶ್‌ ಶುಕ್ರವಾರ ಗುಂಡು ಹಾರಿಸಿ ಬಂಧಿಸಿದ್ದಾರೆ.

ನಗರದ ಊರಿಗಾಂಪೇಟೆ ಬಳಿಯ ಜನತಾ ಕಾಲೊನಿ ನಿವಾಸಿಯಾದ ತಮಿಳರಸನ್‌ ತನ್ನ ಪಕ್ಕದ ಮನೆಯ 8 ವರ್ಷದ ಬಾಲಕಿ ಮೇಲೆ ಗುರುವಾರ ರಾತ್ರಿ ಅತ್ಯಾಚಾರ ಎಸಗಿದ್ದ.

ಪೋಷಕರು ರಾತ್ರಿ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದರು. ಆಗ ಏಕಾಏಕಿ ಮನೆಗೆ ನುಗ್ಗಿದ ಆರೋಪಿಯು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ, ಕೈಗಳನ್ನು ಕಟ್ಟಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಬಾಲಕಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ತಾಯಿಯು ಶುಕ್ರವಾರ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಅತ್ಯಾಚಾರದ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿಯು ಬಾಲಕಿಯನ್ನು ವಿಚಾರಿಸಿದಾಗ ತಮಿಳರಸನ್‌ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಮಾಹಿತಿ ಆಧರಿಸಿ ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದರು. ನಂತರ ಸಿಬ್ಬಂದಿಯು ಆರೋಪಿಗಾಗಿ ಶೋಧ ನಡೆಸುತ್ತಿದ್ದಾಗ ಆತ ಜನತಾ ಕಾಲೊನಿ ಸಮೀಪದ ಯರನಾಗನಹಳ್ಳಿ– ಪೆದ್ದಪಲ್ಲಿ ರಸ್ತೆಯಲ್ಲಿ ಇರುವುದು ಗೊತ್ತಾಯಿತು. ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಅಲ್ಲಿಗೆ ಹೋದ ಸಿಬ್ಬಂದಿಯು ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿಯು ಸಿಬ್ಬಂದಿ ಮೇಲೆ ಕಲ್ಲು ತೂರಿದ್ದಾನೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಕಾನ್‌ಸ್ಟೆಬಲ್‌ ಮುನಿಸ್ವಾಮಿ ಅವರ ಕೈಗೆ ಪೆಟ್ಟಾಗಿದೆ. ಆಗ ಇನ್‌ಸ್ಪೆಕ್ಟರ್‌ ಸೂರ್ಯಪ್ರಕಾಶ್‌ ಸರ್ವಿಸ್‌ ಪಿಸ್ತೂಲ್‌ನಿಂದ ಆರೋಪಿ ಮೇಲೆ 2 ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ತಮಿಳರಸನ್‌ನ ಬಲಗಾಲಿಗೆ ತಗುಲಿದ್ದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಸಿಬ್ಬಂದಿಯು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುನಿಸ್ವಾಮಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ತಮಿಳರಸನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)