ಶುಕ್ರವಾರ, ಮೇ 27, 2022
31 °C
ರೈತ ಸಂಘದಿಂದ ರಾಜ್ಯ ಹೆದ್ದಾರಿ ಬಂದ್‌

ಕಳಪೆ ರಸಗೊಬ್ಬರ ಮಾರಾಟ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಮಾರಾಟದಿಂದ ಬೆಳೆ ನಷ್ಟವಾಗುತ್ತಿದೆ. ಆದರೂ, ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಆರೋಪಿಸಿ ಕಸಬಾ ಹೋಬಳಿಯ ಎನ್. ವಡ್ಡಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ಬಳಿಕ ಕೃಷಿ ಅಧಿಕಾರಿ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.

ಪರವಾನಗಿ ಇಲ್ಲದೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ರಸಗೊಬ್ಬರ ಸರಬರಾಜು ಮಾಡುವ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಬೇಕು. ರೈತರನ್ನು ರಕ್ಷಣೆ ಮಾಡದೆ ಇದ್ದರೆ ಕಳಪೆ ಗೊಬ್ಬರದ ಸಮೇತ ಅಧಿಕಾರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

‘ಸಂಬಂಧಪಟ್ಟ ಅಂಗಡಿಗಳು ಹಾಗೂ ಕಂಪನಿಗಳ ವಿರುದ್ಧ ದೂರು ನೀಡಿದರೆ ಅಧಿಕಾರಿಗಳು ಕ್ರಮವಹಿಸುವುದಿಲ್ಲ. ದಂಧೆಕೋರರ ಜೊತೆ ಶಾಮೀಲಾಗಿ ಜೇಬು ತುಂಬಿಸಿಕೊಂಡು ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಹಲವೆಡೆ ರೈತರಿಗೆ ಮಾರಾಟ ಮಾಡುತ್ತಿರುವ ಗೊಬ್ಬರ ಕಳಪೆ ಗುಣಮಟ್ಟದಿಂದ ಕೂಡಿದೆ. ಫಸಲು ಚೆನ್ನಾಗಿ ಬರಲಿ ಎಂದು ಗೊಬ್ಬರ ಹಾಕಿದರೆ ಕಳೆಗಳು ಬೆಳೆಯುತ್ತಿವೆ. ಭೂಮಿಯಲ್ಲಿ ಫಸಲಿಗಿಂತ ಕಳೆಯೇ ಜಾಸ್ತಿ ಬೆಳೆಯುತ್ತಿದೆ. ಇದಕ್ಕೆ ಕಳಪೆ ಗೊಬ್ಬರಗಳೇ ಕಾರಣ ಎಂದು ಆರೋಪಿಸಿದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಾಯಿಕೊಡೆಗಳಂತೆ ಗೊಬ್ಬರದ ಅಂಗಡಿಗಳು ತಲೆಎತ್ತಿವೆ. ರೈತರಿಗೆ ಗುಣಮಟ್ಟದ ಗೊಬ್ಬರ ನೀಡುತ್ತಿಲ್ಲ. ಬಂಡವಾಳ ಹಾಕಿ ಬೆಳೆ ಬೆಳೆಯುವ ರೈತರು ದಿಕ್ಕು ತೋಚದೆ ಹೈರಾಣಾಗಿದ್ದಾರೆ ಎಂದು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಅಮಾಯಕ ರೈತರನ್ನೇ ಗುರಿಯಾಗಿಸಿ ಆಂಧ್ರ, ತಮಿಳುನಾಡಿನಿಂದ ಕಳಪೆ ಗುಣಮಟ್ಟದ ರಸಗೊಬ್ಬರ ತರುವ ಇಲ್ಲಿನ ಅಂಗಡಿ ಮಾಲೀಕರು ರೈತರಿಗೆ ವಂಚಿಸುತ್ತಿದ್ದಾರೆ. ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮತ್ತೊಂದೆಡೆ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆ ಎಂದು ದೂರಿದರು.

‘ಕಳಪೆ ಗೊಬ್ಬರ ಪೂರೈಕೆ ಕುರಿತು ದೂರುಗಳು ಬಂದಿವೆ. ಗೊಬ್ಬರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ರವಿಕುಮಾರ್ ತಿಳಿಸಿದರು.

ಹೋರಾಟದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮುಖಂಡರಾದ ತೆರ್ನಹಳ್ಳಿ ಆಂಜಿನಪ್ಪ, ಹರೀಶ್, ರಾಮಮೂರ್ತಿ, ಶ್ರೀಕಾಂತ್, ವೇಣು, ಜಗನ್, ತರುಣ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಸಂತೋಷ್, ಸೋಮಶೇಖರ್, ವೇಣು, ನವೀನ್, ಕೇಶವ, ಈಕಂಬಳ್ಳಿ ಮಂಜುನಾಥ, ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು