ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ಅವಧಿ ಮುಂದೂಡಿ: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಆಗ್ರಹ

ಶಾಪ ತಟ್ಟುತ್ತೆ: ಸರ್ಕಾರದ ವಿರುದ್ಧ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಕಿಡಿ
Last Updated 13 ಮೇ 2021, 12:54 IST
ಅಕ್ಷರ ಗಾತ್ರ

ಕೋಲಾರ: ‘ಲಾಕ್‌ಡೌನ್‌ನಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಕೋವಿಡ್‌ನಿಂದ ಪ್ರತಿನಿತ್ಯ ಜೀವ ಭಯದಲ್ಲಿ ಬದುಕುತ್ತಿರುವ ನಮ್ಮ ಸಾಲದ ಕಂತು ಪಾವತಿ ಅವಧಿಯನ್ನು ಸರ್ಕಾರ 3 ತಿಂಗಳು ಮುಂದೂಡಬೇಕು’ ಎಂದು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್‌ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿ ಗುರುವಾರ ಡಿಸಿಸಿ ಬ್ಯಾಂಕ್‌ ಕೇಂದ್ರ ಕಚೇರಿ ಎದುರು ಜಮಾಯಿಸಿದ ಸ್ತ್ರೀಶಕ್ತಿ ಸಂಘಗಳ ಸದಸ್ಯರು, ‘ಸರ್ಕಾರಕ್ಕೆ ನಮ್ಮ ಕಷ್ಟ ತಿಳಿಸಿ ಸಾಲ ಮರುಪಾವತಿಗೆ ಕಾಲಾವಕಾಶ ಕೊಡಿಸಿ. ಇಲ್ಲವಾದರೆ ನಮ್ಮ ಶಾಪ ಆಳುವ ಸರ್ಕಾರಕ್ಕೆ ತಟ್ಟುತ್ತದೆ’ ಎಂದು ಗುಡುಗಿದರು.

‘ಈಗಾಗಲೇ 3 ಬಾರಿ ಸಾಲ ಪಡೆದಿದ್ದೇವೆ. ಒಂದೂ ಕಂತು ಬಾಕಿ ಉಳಿಸಿಕೊಳ್ಳದೆ ಸಕಾಲಕ್ಕೆ ಸಾಲ ಮರುಪಾವತಿಸಿ ಗೌರವ ಕಾಪಾಡಿಕೊಂಡಿದ್ದೇವೆ. ಕೋವಿಡ್ ಕಾರಣಕ್ಕೆ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ಸಂಕಷ್ಟದ ಸಂದರ್ಭದಲ್ಲೂ ಸಾಲದ ಕಂತು ಕಟ್ಟಿ ಎಂದರೆ ಹೇಗೆ?’ ಎಂದು ಗಾಂಧಿನಗರ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆ ಕೃಷ್ಣಮ್ಮ ಪ್ರಶ್ನಿಸಿದರು.

‘ಸಾಲ ಮನ್ನಾ ಮಾಡಿ ಎಂದು ನಾವು ಕೇಳುತ್ತಿಲ್ಲ. ನಮಗೂ ಸ್ವಾಭಿಮಾನವಿದೆ. ಕೋವಿಡ್ ಆತಂಕ ಕಡಿಮೆ ಆಗುವವರೆಗೂ ಕನಿಷ್ಠ 3 ತಿಂಗಳು ಸಾಲ ಮರುಪಾವತಿ ಗಡುವು ಮುಂದೂಡಬೇಕು. ಸರ್ಕಾರ ನಮಗೆ ನೆರವಾಗಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರಿಗೆ ಒತ್ತಾಯಿಸಿದರು.

‘ನೆರೆಹೊರೆಯ ಮನೆಗಳಲ್ಲಿ ಸಾವು ನೋಡುತ್ತಿದ್ದೇವೆ. ಕೋವಿಡ್ ಮಹಾಮಾರಿ ಎಲ್ಲೆಡೆ ಆತಂಕ ಸೃಷ್ಟಿಸಿದೆ, ಸಾವಿನ ಆತಂಕ ಇಣುಕಿ ನೋಡುತ್ತಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂತಹ ಸಂದರ್ಭದಲ್ಲಿ ಪ್ರತಿ ವಾರ ಸಭೆ ನಡೆಸುವುದು ಹೇಗೆ? ಮೊದಲು ನಮ್ಮನ್ನು ಬದುಕಲು ಬಿಡಿ’ ಎಂದು ಮನವಿ ಮಾಡಿದರು.

‘ಕೋವಿಡ್ ಸಂಕಷ್ಟದಲ್ಲಿ ಯಾವ ಧೈರ್ಯದ ಮೇಲೆ ವಾರದ ಸಭೆ ನಡೆಸೋದು. ಹೇಗೆ ಕಂತಿನ ಹಣ ಸಂಗ್ರಹಿಸುವುದು? ಈ ಸತ್ಯ ಅರಿತು ನಮ್ಮ ನೋವನ್ನು ಸರ್ಕಾರಕ್ಕೆ ಮುಟ್ಟಿಸಿ. ನೋವಿನಿಂದ ನರಳುತ್ತಿರುವ ನಮಗೆ ನೆರವಾಗದಿದ್ದರೆ ನಮ್ಮ ಕಣ್ಣೀರಿನ ತಾಪ ಖಂಡಿತ ಸರ್ಕಾರಕ್ಕೆ ತಗಲುತ್ತದೆ’ ಎಂದು ಕಿಡಿಕಾರಿದರು.

ಬ್ಯಾಂಕ್‌ಗೆ ಅಧಿಕಾರವಿಲ್ಲ: ಸ್ತ್ರೀಶಕ್ತಿ ಸಂಘಗಳ ಸದಸ್ಯರ ಮನವಿಗೆ ಸ್ಪಂದಿಸಿದ ಗೋವಿಂದಗೌಡ, ‘ಸಾಲದ ಕಂತು ಪಾವತಿ ಅವಧಿ ಮುಂದೂಡುವ ಅಧಿಕಾರ ಡಿಸಿಸಿ ಬ್ಯಾಂಕ್‌ಗಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇ ತೀರ್ಮಾನ ಮಾಡಬೇಕು’ ಎಂದು ತಿಳಿಸಿದರು.

‘ನಿಮ್ಮ ನೋವನ್ನು ಪ್ರಾಮಾಣಿಕವಾಗಿ ಅಫೆಕ್ಸ್‌ ಬ್ಯಾಂಕ್ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಸರ್ಕಾರ ಸಾಲದ ಕಂತು ಪಾವತಿ ಅವಧಿಯನ್ನು ಮುಂದೂಡದಿದ್ದರೆ ಬ್ಯಾಂಕ್ ಏನೂ ಮಾಡಲು ಸಾಧ್ಯವಿಲ್ಲ. ಕಂತು ಪಾವತಿಸಲೇಬೇಕು. ಇಲ್ಲವಾದರೆ ಬಡ್ಡಿ ಹೊರೆ ಬೀಳುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕಠಾರಿಪಾಳ್ಯದ ವಾಸವಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಾದ ಧನಲಕ್ಷ್ಮಿ, ಕವಿತಾ, ಗಲ್‌ಪೇಟೆಯ ಓಂಶಕ್ತಿ ಸಂಘದ ಸ್ವಸಹಾಯ ಸಂಘದ ಸದಸ್ಯೆ ರೆಡ್ಡಮ್ಮ, ಚಾಮುಂಡೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಕೆ.ಎನ್.ಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT