ಶುಕ್ರವಾರ, ಡಿಸೆಂಬರ್ 4, 2020
20 °C
ಜಿಲ್ಲಾಧಿಕಾರಿ ಬಿಜೆಪಿಯ ಕೈಗೊಂಬೆ: ಶಾಸಕ ನಂಜೇಗೌಡ ಗುಡುಗು

ಚುನಾವಣೆ ಮುಂದೂಡಿಕೆಗೆ ಪತ್ರ ಶೋಭೆಯಲ್ಲ: ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬಿಜೆಪಿ ಕೈಗೊಂಬೆಯಾಗಿರುವ ಜಿಲ್ಲಾಧಿಕಾರಿಯು ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆ ಮುಂದೂಡಿಕೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಅವರಿಗೆ ಶೋಭೆಯಲ್ಲ’ ಎಂದು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಗುಡುಗಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಸದರು ಹಾಗೂ ಬಿಜೆಪಿ ಮುಖಂಡರು ಅಧಿಕಾರಿಗಳನ್ನು ಬೆದರಿಸಿ ತಮ್ಮ ನಿಯಂತ್ರಣದಲ್ಲಿ ಇಟ್ಟಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯಲ್ಲಿನ ಕೆಲ ಅಧಿಕಾರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ಉದ್ದೇಶಕ್ಕೆ ಬಿಜೆಪಿ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಜನಾದೇಶ ಬಂದಿದೆ. ಹೀಗಾಗಿ ಕಾಂಗ್ರೆಸ್‌ನ 11, ಜೆಡಿಎಸ್‌ನ ಒಬ್ಬರು ಮತ್ತು 3 ಮಂದಿ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಪ್ರಜಾಸತ್ತಾತ್ಮಕವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದೇವೆ. ಆದರೆ, ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರುವ ಸಂಚು ಮಾಡುತ್ತಿದೆ’ ಎಂದು ಆರೋಪಿಸಿದರು.

‘ಅಧಿಕಾರ ಶಾಶ್ವತವಲ್ಲ. ಅಧಿಕಾರಕ್ಕಾಗಿ ಅಡ್ಡ ದಾರಿ ಹಿಡಿಯುವುದು ಸರಿಯಲ್ಲ. ಬಿಜೆಪಿಯು ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಅಧಿಕಾರಿಗಳು ಸಹ ಇದಕ್ಕೆ ಕೈಜೋಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಟೀಕಿಸಿದರು.

‘ಹೈಕೋರ್ಟ್‌ ಆದೇಶದಂತೆ ನ.10ರೊಳಗೆ ಚುನಾವಣೆ ನಡೆಯಬೇಕಿದೆ. ಚುನಾವಣಾಧಿಕಾರಿಯಾದ ಮಾಲೂರು ತಹಶೀಲ್ದಾರ್‌ ಕೋರ್ಟ್‌ನ ಆದೇಶದಂತೆ ನ.10ಕ್ಕೆ ಚುನಾವಣೆ ನಿಗದಿಪಡಿಸಿ ಈಗಾಗಲೇ ಸದಸ್ಯರಿಗೆ ತಿಳಿವಳಿಕೆ ಪತ್ರ ರವಾನಿಸಿದ್ದಾರೆ. ಆದರೆ, ಸಂಸದರು ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣೆ ಮುಂದೂಡಿಸುವ ಕುತಂತ್ರ ಮಾಡುತ್ತಿದ್ದಾರೆ’ ಎಂದು ದೂರಿದರು.

ಅಧಿಕಾರಿಗಳೇ ಹೊಣೆ: ‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನೆ ಬಲಿಷ್ಠವಾಗಿದೆ. ಅಧಿಕಾರಿಗಳು ಚುನಾವಣೆ ಮುಂದೂಡಿಕೆಗೆ ಬಿಜೆಪಿ ಮುಖಂಡರಿಗೆ ಸಹಕಾರ ಕೊಟ್ಟರೆ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸುತ್ತೇವೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ಮುಖಂಡರು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರಿಗೆ ಹಣದ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಸೇರಿದಂತೆ ಎಲ್ಲಾ 15 ಸದಸ್ಯರು ಒಗ್ಗಟ್ಟಾಗಿದ್ದಾರೆ. ಬಿಜೆಪಿ ಮುಖಂಡರು ಎಷ್ಟೇ ಸರ್ಕಸ್‌ ಮಾಡಿದರೂ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಕುಟುಕಿದರು.

‘ಬಿಜೆಪಿ ಸದಸ್ಯೆ ಅಪಹರಣವಾಗಿದ್ದಾರೆ ಎಂದು ಆ ಪಕ್ಷದ ಮುಖಂಡರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದರೆ, ಆ ಸದಸ್ಯೆಯ ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ದೂರು ಕೊಟ್ಟಿಲ್ಲ. ಆ ಸದಸ್ಯೆಗೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ. ಆ ಸದಸ್ಯೆ ಮತ್ತು ಅವರ ಪತಿ ಬಟ್ಟೆ ಖರೀದಿಗಾಗಿ ಹೊರ ರಾಜ್ಯಕ್ಕೆ ಹೋಗಿರುವುದಾಗಿ ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿದ್ದಾರೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು