ಮಂಗಳವಾರ, ಜೂನ್ 28, 2022
26 °C
ರೈತನ ಸಾವಿನ ಪ್ರಕರಣ: ಜಿಲ್ಲಾಧಿಕಾರಿ ಜತೆ ಶಾಸಕಿ ರೂಪಕಲಾ ಚರ್ಚೆ

ತಹಶೀಲ್ದಾರ್‌ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೃಷಿ ಭೂಮಿಯ ಫಲವತ್ತತೆಗಾಗಿ ಕೆರೆಯ ಮಣ್ಣು ಕೊಂಡೊಯ್ದ ರೈತನಿಗೆ ಕೆಜಿಎಫ್ ತಹಶೀಲ್ದಾರ್‌ ₹ 72 ಸಾವಿರ ದಂಡ ವಿಧಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ತಹಶೀಲ್ದಾರ್‌ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಶಾಸಕಿ ಎಂ.ರೂಪಕಲಾ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರನ್ನು ಭೇಟಿಯಾದ ಶಾಸಕಿ, ‘ತಹಶೀಲ್ದಾರ್ ಸುಜಾತಾ ಅವರ ಅಮಾನವೀಯ ವರ್ತನೆ ರೈತ ಚಂಗಾರೆಡ್ಡಿ ಅವರನ್ನು ಬಲಿ ಪಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಜಿಎಫ್ ತಾಲ್ಲೂಕಿನ ಚಕ್ರಬಂಡೆ ಗ್ರಾಮದ ರೈತ ಚಂಗಾರೆಡ್ಡಿ ಅವರು ಅದೇ ಗ್ರಾಮದ ದೊಡ್ಡ ಕೆರೆಯಿಂದ ತಮ್ಮ ಜಮೀನಿಗಾಗಿ ಮಣ್ಣು ತೆಗೆಯುತ್ತಿದ್ದರು. ಆಗ ಸ್ಥಳಕ್ಕೆ ಹೋದ ತಹಶೀಲ್ದಾರ್‌ ಸುಜಾತಾ ಅವರು 2 ಟ್ರ್ಯಾಕ್ಟರ್‌ ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಚಂಗಾರೆಡ್ಡಿ ಅವರು ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿ ಮೂಲಕ ತಹಶೀಲ್ದಾರ್‌ಗೆ ₹ 11 ಸಾವಿರ ಲಂಚ ಕೊಟ್ಟಿದ್ದರು’ ಎಂದು ಹೇಳಿದರು.

‘ಆದರೂ ಸುಜಾತಾ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಚಂಗಾರೆಡ್ಡಿ ಅವರಿಗೆ ₹ 72 ಸಾವಿರ ದಂಡ ಹಾಕಿಸಿದ್ದರು. ದಂಡದ ಮೊತ್ತ ಕೇಳಿ ಆಘಾತಗೊಂಡ ಚಂಗಾರೆಡ್ಡಿ ಅವರು ಹೃದಯಾಘಾತದಿಂದ ಮೃತಪಟ್ಟರು. ಬಳಿಕ ಅವರ ಭಾಮೈದ ಅಶೋಕ್‌ರೆಡ್ಡಿ ಮೀಟರ್‌ ಬಡ್ಡಿಗೆ ಸಾಲ ಪಡೆದು ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಚಂಗಾರೆಡ್ಡಿ ಅವರ ಸಾವಿಗೆ ತಹಶೀಲ್ದಾರ್‌ರ ಅಮಾನವೀಯ ವರ್ತನೆಯೇ ಕಾರಣ. ಮೃತ ರೈತನ ಕುಟುಂಬ ಸದಸ್ಯರು ಪಾವತಿಸಿರುವ ದಂಡದ ಮೊತ್ತವನ್ನು ವಾಪಸ್‌ ಕೊಡಬೇಕು ಮತ್ತು ಸುಜಾತಾ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಬೇಜವಾಬ್ದಾರಿ ವರ್ತನೆ: ‘ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಇಲ್ಲದೆ ಚಂಗಾರೆಡ್ಡಿ ಅವರು ಕೃಷಿ ಜಮೀನಿಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು. ಆಗ ತಹಶೀಲ್ದಾರ್ ಅವರು ದಾಳಿ ನಡೆಸಿ ವಾಸ್ತವಾಂಶ ತಿಳಿಯದೆ ಈ ರೀತಿ ತೊಂದರೆ ಉಂಟು ಮಾಡಿದ್ದಾರೆ. ತಹಶೀಲ್ದಾರ್ ಬೇಜವಾಬ್ದಾರಿ ವರ್ತನೆಯಿಂದ ಚಂಗಾರೆಡ್ಡಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ’ ಎಂದು ಆರೋಪಿಸಿದರು.

‘ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಮೀನಿನ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಕೆರೆಯ ಮಣ್ಣನ್ನು ತೋಟಕ್ಕೆ ಸಾಗಿಸುವುದು ತಪ್ಪೇ?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆಗಳಲ್ಲಿ ಮಣ್ಣು ತೆಗೆಯುವುದಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುಮತಿ ನೀಡುವಂತಿಲ್ಲ. ಪಿಡಿಒಗಳು ಅನುಮತಿ ನೀಡಿದ್ದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದರು.

ಹಣ ಕಟ್ಟುವಂತಿಲ್ಲ: ‘ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಪಡೆಯಲು ಹಣ ಕಟ್ಟುವಂತಿಲ್ಲ. ಬದಲಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಟ್ಟಿಗೆ ಕಾರ್ಖಾನೆ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಮಣ್ಣು ಬೇಕಿದ್ದರೆ ಪ್ರತಿ ಟನ್‌ಗೆ ₹ 90 ಶುಲ್ಕ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

‘ರೈತ ಮೃತಪಟ್ಟಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಚಂಗಾರೆಡ್ಡಿ ಅವರ ಕುಟುಂಬಕ್ಕೆ ₹ 72 ಸಾವಿರ ವಾಪಸ್‌ ಕೊಡಿಸುತ್ತೇನೆ. ರೈತರ ವಿಷಯದಲ್ಲಿ ಇಂತಹ ಅಮಾನವೀಯ ವರ್ತನೆಗೆ ಅವಕಾಶವಿಲ್ಲದಂತೆ ಆದೇಶ ಹೊರಡಿಸುತ್ತೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಮೃತ ರೈತ ಚಂಗಾರೆಡ್ಡಿ ಕುಟುಂಬ ಸದಸ್ಯರು, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.