ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಮಹಾನ್ ಮೋಸಗಾರ

ಬಲಿಜ ಸಮುದಾಯದ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಮನೋಹರ್ ಟೀಕೆ
Last Updated 16 ಏಪ್ರಿಲ್ 2019, 19:20 IST
ಅಕ್ಷರ ಗಾತ್ರ

ಕೋಲಾರ: ‘ರೈತರು, ಬಡವರನ್ನು ಸಂಕಷ್ಟದಿಂದ ಪಾರು ಮಾಡಲು ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಸಲಹೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಮಂಗಳವಾರ ನಡೆದ ಬಲಿಜ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ದೇಶದ ಜನರಿಗೆ 5 ವರ್ಷಗಳಲ್ಲಿ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಸಮುದಾಯದವರು ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಬಾರದು’ ಎಂದು ತಿಳಿಸಿದರು.

‘ಪ್ರಧಾನಿ ಮೋದಿ ಮಹಾನ್ ಮೋಸಗಾರ. ಬಿಜೆಪಿಗೆ ಮತ್ತೆ ಮತ ನೀಡಿದರೆ ಭವಿಷ್ಯದಲ್ಲಿ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರವಿದೆ. ದೇಶದ ಹಿತದೃಷ್ಠಿಯಿಂದ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮುನಿಯಪ್ಪ ಅವರನ್ನು ಬೆಂಬಲಿಸಿ’ ಎಂದು ಕೋರಿದರು.

‘ಬಿಜೆಪಿ ಸರ್ಕಾರದಿಂದ ಜನ ನೆಮ್ಮದಿಯಾಗಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಅಡುಗೆ ಅನಿಲ ಬೆಲೆ ಹೆಚ್ಚಳ ಸೇರಿದಂತೆ ಸಾಕಷ್ಟು ವಿಚಾರದಲ್ಲಿ ಕಷ್ಟ ಅನುಭವಿಸಿದ್ದಾರೆ. ಬಿಜೆಪಿ ಹಿಂದಿನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಬಡವರ ಖಾತೆಗೆ ಹಾಕಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸಲಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ’ ಎಂದು ಆರೋಪಿಸಿದರು.

ಅನುಮಾನ ಬೇಡ: ‘ವೈಯಕ್ತಿಕ ಕಾರಣಕ್ಕೆ ನಾನು ಕೋಲಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ಇಲ್ಲಿ ಸಕ್ರಿಯನಾಗಿರುತ್ತೇನೆ. ಕೋಲಾರವನ್ನು ಮರೆಯುವ ಪ್ರಶ್ನೆಯೇ ಇಲ್ಲ. ನನ್ನ ಕೈಲಾಗುವ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ’ ಎಂದು ಭರವಸೆ ನೀಡಿದರು.

‘ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ನನಗೆ ತುಮಕೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕ್ಷೇತ್ರದ ಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಆ ಭಾಗದಲ್ಲಿ ಓಡಾಡುತ್ತಿದ್ದೇನೆ. ಬಲಿಜ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ್ದು, ಸಮುದಾಯವು ಮೈತ್ರಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುತ್ತದೆ’ ಎಂದರು.

ಟಿಕೆಟ್‌ ಭಿಕ್ಷೆ: ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು. ಶಾಸಕ ಶ್ರೀನಿವಾಸಗೌಡರು ಈ ಸಂಗತಿ ಅರಿಯದೆ ಬೇರೆ ದಾರಿಯಲ್ಲಿ ಸಾಗುತ್ತಿದ್ದಾರೆ. ಇದರ ಪರಿಣಾಮ ಅವರಿಗೆ ಚುನಾವಣೆ ಬಳಿಕ ಗೊತ್ತಾಗಲಿದೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌ ಹೇಳಿದರು.

‘ಮನೋಹರ್ ಅವರು ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ದಿನದಿಂದ ಹಿಂದುಳಿದ ವರ್ಗಗಳು ಹಾಗೂ ಬೇರೆ ಬೇರೆ ಸಮುದಾಯದವರನ್ನು ಸಂಘಟನೆ ಮಾಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ನಿರಾಯಾಸವಾಗಿ ಗೆಲ್ಲುತ್ತಿದ್ದರು. ಆದರೆ, ವರಿಷ್ಠರ ಸೂಚನೆಯಂತೆ ಕ್ಷೇತ್ರದಲ್ಲಿ ಸ್ಪರ್ಧಿಸದೆ ಶ್ರೀನಿವಾಸಗೌಡರಿಗೆ ಟಿಕೆಟ್‌ ಭಿಕ್ಷೆ ನೀಡಿ ಸುಮ್ಮನಾದರು’ ಎಂದು ಛೇಡಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ಬಲಿಜ ಸಮುದಾಯದ ಮುಖಂಡರಾದ ಕೆ.ವಿ.ಸುರೇಶ್‌ಕುಮಾರ್, ಶ್ರೀಧರ್, ರಘು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT