ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಆಶಯಕ್ಕೆ ಜೀವ ನೀಡಿ‌: ಪ್ರಾಂಶುಪಾಲ ನಾಗೇಶ್‌ ಕಿವಿಮಾತು

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಯಟ್ ಪ್ರಾಂಶುಪಾಲ ನಾಗೇಶ್‌ ಕಿವಿಮಾತು
Last Updated 5 ಮಾರ್ಚ್ 2021, 13:43 IST
ಅಕ್ಷರ ಗಾತ್ರ

ಕೋಲಾರ: ‘ಶ್ರದ್ಧೆ, ಏಕಾಗ್ರತೆಯೊಂದಿಗೆ ಓದಿ ಪೋಷಕರ ಆಶಯಗಳಿಗೆ ಜೀವ ನೀಡಿ. ಗುಣಾತ್ಮಕ ಫಲಿತಾಂಶದೊಂದಿಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಛಲದಿಂದ ಮುನ್ನಡೆಯಿರಿ’ ಎಂದು ಡಯಟ್ ಪ್ರಾಂಶುಪಾಲ ಎಸ್.ಜಿ.ನಾಗೇಶ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಇನ್ನು ಕೇವಲ 106 ದಿನ ಬಾಕಿಯಿವೆ’ ಎಂದರು.

‘ಕೋವಿಡ್ ಆತಂಕದ ನಡುವೆಯೂ ಅರಾಭಿಕೊತ್ತನೂರು ಶಾಲೆಯು ಹಿಂದಿನ ವರ್ಷ ಶೇ 100ರ ಫಲಿತಾಂಶ ದಾಖಲಿಸಿದೆ. ಇದು ಈ ಬಾರಿಯೂ ಗುಣಾತ್ಮಕತೆಯೊಂದಿಗೆ ಮುಂದುವರಿಯಬೇಕು. ಜಿಲ್ಲೆಯು ಹಿಂದಿನ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ಹಾಗೂ ಗುಣಾತ್ಮಕತೆಯಲ್ಲಿ 2ನೇ ಸ್ಥಾನ ಗಳಿಸಿದೆ. ಈ ಬಾರಿ ಜಿಲ್ಲೆ ಪ್ರಥಮ ಸ್ಥಾನಕ್ಕೇರಬೇಕು’ ಎಂದು ಆಶಿಸಿದರು.

‘ಅರಾಭಿಕೊತ್ತನೂರು ಶಾಲೆ ಮಾದರಿ ಶಾಲೆಯಾಗಿದೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಲ್ಯಾಬ್‌ ಇದೆ. ಶೇ 30ರಷ್ಟು ಪಠ್ಯ ಕಡಿತಗೊಂಡಿದೆ. ಇರುವ ಸಮಯದಲ್ಲಿ ಚೆನ್ನಾಗಿ ಓದಿ. ಬೇಸಿಗೆ ಆರಂಭವಾಗಿದ್ದು, ಹೆಚ್ಚು ನೀರು ಕುಡಿಯಿರಿ. ಆರೋಗ್ಯ ರಕ್ಷಣೆಗೆ ಒತ್ತು ನೀಡಿ’ ಎಂದು ತಿಳಿಸಿದರು.

‘ಕಲಿಕಾ ವಿಧಾನ, ಮುಂದಿನ ಗುರಿ, ಸಮಯಪಾಲನೆ ಅಂಶಗಳ ಬಗ್ಗೆ  ಶ್ರದ್ಧೆ ಹೆಚ್ಚಿಸಿಕೊಳ್ಳಿ. ಇಲಾಖೆ ನೀಡಿರುವ ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿ. ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿ ಸಿದ್ಧವಾಗುತ್ತಿದ್ದು, ಅದು ಶಾಲೆಗಳಿಗೆ ಸಿಗಲಿದೆ. ಇದರ ಸದುಪಯೋಗ ಪಡೆಯಿರಿ’ ಎಂದು ಸಲಹೆ ನೀಡಿದರು.

‘ಭಾರತ ರತ್ನಗಳಾದ ವಿಶ್ವೇಶ್ವರಯ್ಯ, ಸಿ.ಎನ್‍.ಆರ್‌.ರಾವ್‌ ಅವರಂತಹ ಧೀಮಂತರನ್ನು ನೀಡಿದ ಜಿಲ್ಲೆ ನಮ್ಮದು. ಅದೇ ರೀತಿ ಅತಿ ಹೆಚ್ಚು ಕೆಎಎಸ್, ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು, ಜ್ಞಾನಪೀಠ ಪುರಸ್ಕೃತರು ಮತ್ತು ವಕೀಲರನ್ನು ನೀಡಿರುವ ಜಿಲ್ಲೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಭವಾನಿ, ಶ್ವೇತಾ, ಸಚ್ಚಿದಾನಂದಮೂರ್ತಿ, ಸುಗುಣಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ವಸಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT