ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿದ ಪ್ರಕರಣ: ಪ್ರಾಂಶುಪಾಲೆ, ಶಿಕ್ಷಕ ಬಂಧನ

ನಾಲ್ವರ ಮೇಲೆ ದೌರ್ಜನ್ಯ ಪ್ರಕರಣ, ಒಬ್ಬರ ಮೇಲೆ ಪೋಕ್ಸೊ
Published 17 ಡಿಸೆಂಬರ್ 2023, 16:01 IST
Last Updated 17 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ಕೋಲಾರ: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲೆ ಭಾರತಮ್ಮ ಮತ್ತು ಚಿತ್ರಕಲಾ ಸಹ ಶಿಕ್ಷಕ ಮುನಿಯಪ್ಪ ಅವರನ್ನು ಭಾನುವಾರ ರಾತ್ರಿ ಮಾಸ್ತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆ ನಂತರ ಶಾಲೆಯ ಮೂವರು ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ.

ವಸತಿ ಶಾಲೆಯ ಪ್ರಾಂಶುಪಾಲೆ, ಚಿತ್ರಕಲಾ ಸಹ ಶಿಕ್ಷಕ, ಪ್ರಭಾರ ವಾರ್ಡನ್‌ ಮಂಜುನಾಥ್‌, ಅತಿಥಿ ಶಿಕ್ಷಕ ಅಭಿಷೇಕ್‌, ಸ್ವಚ್ಛತಾ ಸಿಬ್ಬಂದಿ ಕಲಾವತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಆರ್‌.ಶ್ರೀನಿವಾಸ್‌ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ದೂರು ನೀಡಿದ್ದರು. 

ಈ ಪೈಕಿ ನಾಲ್ವರ ವಿರುದ್ಧ ದೌರ್ಜನ್ಯ ಪ್ರಕರಣ ಮತ್ತು ಅನುಮತಿ ಇಲ್ಲದೇ ಮಕ್ಕಳ ವಿಡಿಯೊ ಸೆರೆ ಹಿಡಿದು ಹಂಚಿಕೊಂಡಿರುವುದಕ್ಕೆ ಒಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. 

ಇದಕ್ಕೂ ಮೊದಲು ಭಾರತಮ್ಮ, ಮಂಜುನಾಥ್ ಹಾಗೂ ಮುನಿಯಪ್ಪ ಅವರನ್ನು ಇಲಾಖೆಯು
ಅಮಾನತುಗೊಳಿಸಿತ್ತು. ಅಭಿಷೇಕ್‌ ಹಾಗೂ ಕಲಾವತಿ ಅವರಿಗೆ ಕೆಲಸಕ್ಕೆ ಹಾಜರಾಗದಂತೆ ಸೂಚಿಸಲಾಗಿತ್ತು. ಮೂವರ ಅಮಾನತು ಆದೇಶದಲ್ಲಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಲಾಗಿದೆ. 

ಮಲದ ಗುಂಡಿ ಸ್ವಚ್ಚಗೊಳಿಸಲು ಮಕ್ಕಳನ್ನು ಇಳಿಸಿದ್ದನ್ನು ‘ಪ್ರಜಾವಾಣಿ’ ಭಾನುವಾರ ಮುಖಪುಟ
ದಲ್ಲಿ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ  ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಪ್ರಕರಣದ ತನಿಖೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದರು. 

ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಪೊಲೀಸರು, ಸಾಮಾಜಿಕ ಹೋರಾಟಗಾರರು, ದಲಿತ ಸಂಘಟನೆಯ ಪ್ರತಿನಿಧಿಗಳು ಮತ್ತು ಪೋಷಕರು ಭೇಟಿ ನೀಡುತ್ತಲೇ ಇದ್ದರು. 

‘ತಲೆಮರೆಸಿಕೊಂಡಿರುವವರ ಪತ್ತೆಗೆ ಶೋಧ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಒತ್ತಡ, ಪ್ರಭಾವಕ್ಕೆ ಮಣಿಯುವುದಿಲ್ಲ. ವಸತಿ ಶಾಲೆಗೆ ತೆರಳಿ ಪರಿಶೀಲಿಸಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್‌.ಶ್ರೀನಿವಾಸ್‌ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳಿಂದ ಮಾಹಿತಿ ಕಲೆಹಾಕಿದರು. 

‘ಮಕ್ಕಳಿಂದ ಈ ಮೂವರು ಸಿಬ್ಬಂದಿಯು ಶಾಲಾ ಆವರಣ, ಇಂಗು ಗುಂಡಿ ಸ್ವಚ್ಛಗೊಳಿಸಿದ್ದಾರೆ. ಶಿಕ್ಷಕರ ನಡುವೆ ಸಮನ್ವಯ ಕೊರತೆ, ಅಸಮರ್ಪಕ ನಿರ್ವಹಣೆ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಈ ಕ್ರಮ ವಹಿಸಲಾಗಿದೆ’ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

‘ಮೆನು ಚಾರ್ಟ್‌ ಪ್ರಕಾರ ಮಕ್ಕಳಿಗೆ ತಿಂಡಿ, ಆಹಾರ ನೀಡುತ್ತಿಲ್ಲ. ಅತಿಥಿ ಶಿಕ್ಷಕ ಅಭಿಷೇಕ್‌, ಮಕ್ಕಳಿಗೆ ಹೊಡೆದು, ದೈಹಿಕ ಹಿಂಸೆ ನೀಡಿರುವುದು ಕಂಡು ಬಂದಿದೆ. ಸ್ವಚ್ಛತಾ ಸಿಬ್ಬಂದಿ ಕಲಾವತಿ, ಮಕ್ಕಳನ್ನು ಶಾಲಾ ಆವರಣ, ಇಂಗು ಗುಂಡಿ ಸ್ವಚ್ಛತೆಗೆ ಬಳಸಿಕೊಂಡಿದ್ದಾರೆ. ಪ್ರಾಂಶುಪಾಲರು ಅದನ್ನು ಗಮನಿಸಿ ಕಲಾವತಿ ಹಾಗೂ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಾಯಂ ಹಾಗೂ ಅತಿಥಿ ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲ. ಮುನಿಯಪ್ಪ ಹಾಗೂ ಅತಿಥಿ ಶಿಕ್ಷಕ ಮಾರೇಶ್‌ ಅವರು ಫೋಟೊ ಹಾಗೂ ವಿಡಿಯೊ
ತೆಗೆದು ಹಂಚಿಕೊಂಡಿರುವುದು ಗೊತ್ತಾಗಿದೆ’ ಎಂದು ತನಿಖಾಧಿಕಾರಿ  ಹೇಳಿದ್ದಾರೆ.

ಆದರೆ, ವಸತಿ ನಿಲಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿದ್ದ ಹಿಂಸೆ ಹಾಗೂ ಇತರ ದೌರ್ಜನ್ಯ ವಿರೋಧಿಸಿದ್ದ ಮುನಿಯಪ್ಪ ಅವರನ್ನು ಅಮಾನತುಗೊಳಿಸಿರುವುದಕ್ಕೆ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ.

ನ್ಯಾಯಾಧೀಶ, ಅಧಿಕಾರಿಗಳ ಭೇಟಿ: ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಸುನಿಲ್ ಎಸ್‌. ಹೊಸಮನಿ ಕೂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಮಕ್ಕಳೊಂದಿಗೆ ಪ್ರತ್ಯೇಕ‌ ಮಾತುಕತೆ ನಡೆಸಿ ಅಡುಗೆ
ಕೋಣೆ, ಮಕ್ಕಳ ವಾಸ್ತವ್ಯ ಕೊಠಡಿ ಹಾಗೂ ಹಾಸ್ಟೆಲ್‌ನ ವಿವಿಧೆಡೆ ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ
ಆರ್‌.ಶ್ರೀನಿವಾಸ್‌, ಮಾಲೂರು ತಹಶೀಲ್ದಾರ್‌ ರಮೇಶ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಾಲೂರು ಎನ್‌.ವೆಂಕಟರಾಂ, ಸಫಾಯಿ ಕರ್ಮಚಾರಿ ರಾಜ್ಯ ಸಮಿತಿ ಸದಸ್ಯೆ ಪದ್ಮಾ ವಸತಿ ನಿಲಯಕ್ಕೆ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

‘ಬಾಲಕಿ ಬಟ್ಟೆ ಬದಲಿಸುವ ವಿಡಿಯೊ’

‘ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಕಿರುಕುಳ ಅತಿರೇಕಕ್ಕೆ ಹೋಗಿದೆ. ಬಾಲಕಿಯೊಬ್ಬಳು ಬಟ್ಟೆ ಬದಲಿಸುವ ಫೋಟೊವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ’ ಎಂದು ಪೋಷಕರೊಬ್ಬರು ಆರೋಪಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕ್ರೈಸ್‌ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು, ‘ವಿಡಿಯೊ ವಿಷಯವೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಯಾರು ವಿಡಿಯೊ ಸೆರೆ ಹಿಡಿದಿದ್ದಾರೆ ಎಂದು ತನಿಖೆಯಿಂದಷ್ಟೇ ಗೊತ್ತಾಗಬೇಕು’ ಎಂದರು.

‘ಈ ಘಟನೆ ನಮಗೆ ಪಾಠವಾಗಿದೆ. ಇಂಥಹದು ಎಲ್ಲೂ ನಡೆಯದಂತೆ ನೋಡಿಕೊಳ್ಳುತ್ತೇವೆ. ಪ್ರಾಂಶುಪಾಲರು, ಶಿಕ್ಷಕರ ನಡುವೆ ಹೊಂದಾಣಿಕೆಯೇ ಇಲ್ಲ. ವಸತಿ ಶಾಲೆಯ ಇಡೀ ವ್ಯವಸ್ಥೆ ಬದಲಾಯಿಸಿ ಹೊಸ ಶಿಕ್ಷಕರನ್ನು ನಿಯೋಜಿಸುತ್ತೇವೆ. ಇಬ್ಬರು ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆಯುತ್ತೇವೆ’ ಎಂದು ಹೇಳಿದರು.

ಜನರನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಛತೆ ಮಾಡಿಸುವುದನ್ನು ಬಸವಲಿಂಗಪ್ಪ ನಿಷೇಧಿಸಿದ್ದರು. ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಶಾಲಾ‌ ಮಕ್ಕಳನ್ನೇ ಬಳಸಿಕೊಂಡದ್ದು ಖಂಡನೀಯ
–ಡಾ.ಜಿ.ಪರಮೇಶ್ವರ, ಗೃಹ ಸಚಿವ
‘ಪ್ರಜಾವಾಣಿ’ ವರದಿ ಗಮನಿಸಿದ್ದು, ಇದೊಂದು ಗಂಭೀರವಾದ ವಿಷಯ. ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಭಾರಿ ಲೋಪ ಎಸಗಿದ್ದಾರೆ. ತನಿಖೆಗೆ ಆದೇಶಿಸಿದ್ದೇನೆ.
–ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ದೈಹಿಕ ದೌರ್ಜನ್ಯ ನಡೆಸಿರುವುದು ಅತ್ಯಂತ ಹೇಯ ಘಟನೆ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರೇ ಶೋಷಣೆಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
–ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ
ಶಿಕ್ಷಕರು, ಮಕ್ಕಳನ್ನು ಮಾತನಾಡಿಸಿ ಮಾಹಿತಿ ಪಡೆದಿದ್ದೇನೆ. ಸಚಿವ ಮಹದೇವಪ್ಪ ಜೊತೆ ಮಾತನಾಡಿದ್ದು, ಕ್ರಮ ಕೈಗೊಳ್ಳಲಾಗಿದೆ. ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆಯಲಾಗುವುದು.
–ಕೆ.ವೈ.ನಂಜೇಗೌಡ, ಮಾಲೂರು ಶಾಸಕ
ಸಹ ಶಿಕ್ಷಕ ಮುನಿಯಪ್ಪ

ಸಹ ಶಿಕ್ಷಕ ಮುನಿಯಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT