ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಬಾಕಿ: ಪಾವತಿಗೆ ಎಚ್ಚರಿಕೆ

Last Updated 21 ನವೆಂಬರ್ 2019, 15:14 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಗುರುವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಕಂದಾಯ ಅಧಿಕಾರಿಗಳು ಶೀಘ್ರವೇ ತೆರಿಗೆ ಪಾವತಿಸುವಂತೆ ಎಚ್ಚರಿಕೆ ನೀಡಿದರು.

2002–03ನೇ ಸಾಲಿನಿಂದಲೂ ಆಸ್ತಿ ತೆರಿಗೆ ಪಾವತಿಸದ, ಅರ್ಧ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಮಾಲೀಕರಿಗೆ ನಗರಸಭೆಯಿಂದ ಇತ್ತೀಚೆಗೆ ನೋಟಿಸ್‌ ಜಾರಿ ಮಾಡಿ ನ.21ರೊಳಗೆ ತೆರಿಗೆ ಕಟ್ಟುವಂತೆ ಸೂಚಿಸಲಾಗಿತ್ತು. ಆದರೂ ಸಾಕಷ್ಟು ಆಸ್ತಿ ಮಾಲೀಕರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸಲಿಲ್ಲ. ಹೀಗಾಗಿ ನಗರಸಭೆ ಕಂದಾಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಕೆಲ ಆಸ್ತಿ ಮಾಲೀಕರು, ‘ತೆರಿಗೆ ಪಾವತಿಗೆ ಸ್ವಲ್ಪ ಕಾಲಾವಕಾಶ ನೀಡಿ. ಕಂತಿನ ರೂಪದಲ್ಲಿ ತೆರಿಗೆ ಪಾವತಿಸುತ್ತೇವೆ’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಹಣಕಾಸು ವರ್ಷದ ಆರಂಭದ 3 ತಿಂಗಳು ಕಂತಿನ ರೂಪದಲ್ಲಿ ತೆರಿಗೆ ಪಾವತಿಸಲು ಅವಕಾಶವಿತ್ತು. ನೋಟಿಸ್ ನೀಡಿದ ನಂತರ ಅದಕ್ಕೆ ಅವಕಾಶವಿಲ್ಲ. ಬಾಕಿ ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ನಗರದ ಕೋಟೆ ಬಡಾವಣೆಯ ಸ್ಯಾಮ್ಯೂಯಲ್ ಪುಟ್ಟರಾಜು ₹ 1,67 ಲಕ್ಷ, ಡಾ.ಶಾರದಾ ₹ 2.30 ಲಕ್ಷ, ಮೇರಿ ಕಮಿಟಿ ಹಾಲ್‌ನ ₹ 5.93 ಲಕ್ಷ, ಮಹಿಳಾ ಸಮಾಜ ಶಾಲೆ ಹಾಗೂ ಕಾಲೇಜಿನ ಒಟ್ಟು ₹ 23 ಲಕ್ಷ, ಎಂ.ಜಿ ರಸ್ತೆಯಲ್ಲಿನ ಬೇಕರಿಯೊಂದರ ₹ 16.15 ಲಕ್ಷ ಸೇರಿದಂತೆ ಅನೇಕ ಮಂದಿ ಆಸ್ತಿ ತೆರಿಗೆ ಪಾವತಿಸಿಲ್ಲ’ ಎಂದು ಕಂದಾಯ ಅಧಿಕಾರಿ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.

₹ 2 ಕೋಟಿ ಬಾಕಿ: ‘ಆಸ್ತಿ ಮಾಲೀಕರು ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ವಸೂಲಿಗೆ ಮುಂದಾಗಿದ್ದೇವೆ. ನಗರಸಭೆ ವ್ಯಾಪ್ತಿಯಲ್ಲಿ 34 ಸಾವಿರ ಆಸ್ತಿಗಳಿದ್ದು, 22 ಸಾವಿರ ಆಸ್ತಿಗಳ ಖಾತೆಯಾಗಿದೆ. 2019–20ನೇ ಸಾಲಿನಲ್ಲಿ ₹ 5 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿಯಿದ್ದು, ಈವರೆಗೆ ಶೇ 60ರಷ್ಟು ಮಾತ್ರ ವಸೂಲಿಯಾಗಿದೆ. ₹ 2 ಕೋಟಿ ತೆರಿಗೆ ವಸೂಲಿ ಬಾಕಿಯಿದೆ’ ಎಂದು ವಿವರಿಸಿದರು.

‘43 ಆಸ್ತಿ ಮಾಲೀಕರು ಬಾಕಿ ಉಳಿಸಿಕೊಂಡಿರುವ ಸುಮಾರು ₹ 1.05 ಕೋಟಿ ತೆರಿಗೆ ವಸೂಲಾತಿಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ಡಿಸೆಂಬರ್‌ನಲ್ಲಿ ಅದಾಲತ್‌ ನಡೆಸಲಾಗುತ್ತದೆ’ ಎಂದು ಹೇಳಿದರು.

ನಗರಸಭೆ ಕಂದಾಯ ಅಧಿಕಾರಿ ವಿದ್ಯಾ, ಕಂದಾಯ ನಿರೀಕ್ಷಕ ತ್ಯಾಗರಾಜ್, ಕರ ಸಂಗ್ರಹಗಾರ ಅಭಿಷೇಕ್ ಮಾನೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT