ಸೋಮವಾರ, ಮಾರ್ಚ್ 1, 2021
19 °C
ಆತ್ಮಹತ್ಯೆಯ ಅಣಕು ಪ್ರದರ್ಶನ ಮಾಡಿ ಆಕ್ರೋಶ

ಕೇಂದ್ರ ಕೃಷಿ ಕಾಯ್ದೆ: ರೈತರ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಟ್ರ್ಯಾಕ್ಟರ್‌ಗಳ ಮೂಲಕ ತೆರಳುತ್ತಿದ್ದ ರೈತ ಮುಖಂಡರನ್ನು ಪೊಲೀಸರು
ತಡೆದರು.

ಇದಕ್ಕೆ ಆಕ್ಷೇಪ ಎತ್ತಿದ ರೈತ ಮುಖಂಡರು ಟ್ರ್ಯಾಕ್ಟರ್ ಮೂಲಕ ತೆರಳಲು ಬಿಡುವಂತೆ ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ರಸ್ತೆತಡೆ ನಡೆಸಿದರು. ರೈತರ ಆತ್ಮಹತ್ಯೆಯ ಅಣಕು ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

‘ದೆಹಲಿಯಲ್ಲಿ ರೈತರು 62 ದಿನದಿಂದ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದರೂ ಅವರತ್ತ ಕಿವಿಗೊಡದೇ ಇರುವ ಸರ್ಕಾರದ ಉದ್ದೇಶವೇನು? ರಾಜ್ಯದಾದ್ಯಂತ ರೈತರು ಟ್ರ್ಯಾಕ್ಟರ್ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿರುವುದು ಕೇವಲ ಮಾದರಿ ಮಾತ್ರ ಎಂದು ರಾಜ್ಯ ಪ್ರಾಂತ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಹಸಿರು ಶಾಲನ್ನು ಹೊದ್ದುಕೊಂಡು ಅಧಿಕಾರಕ್ಕಾಗಿ ನಿಲ್ಲುತ್ತಿದ್ದಾರೆಯೇ ಹೊರತು ರೈತರ ಪರವಾಗಿ ನಿಲ್ಲುತ್ತಿಲ್ಲ. ಗೋಹತ್ಯೆ ನಿಷೇಧದಂತಹ ಕಾನೂನು ಜಾರಿಗೆ ತರುವ ಮೂಲಕ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ದೇಶದಲ್ಲಿ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಮೂರು ಜನರು ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ. ರೈತರ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರೈತ ಮುಖಂಡರ ಮಾತಿಗೆ ಪೊಲೀಸರು ಜಗ್ಗದ ಕಾರಣ ಟ್ರ್ಯಾಕ್ಟರ್‌ಗಳನ್ನು ಹಿಂದಕ್ಕೆ ಕಳುಹಿಸಿ, ಕೆಲವರು ಕಾರುಗಳ ಮೂಲಕ ಬೆಂಗಳೂರಿಗೆ ತೆರಳಿದರು.
ಸಿಐಟಿಯು ಶ್ರೀನಿವಾಸ್ ಮುಖಂಡ ಮರಗಲ್ ಶ್ರೀನಿವಾಸ್ ಸೇರಿದಂತೆ ಹಲ ರೈತ ಮುಖಂಡರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.