ಬುಧವಾರ, ಆಗಸ್ಟ್ 4, 2021
23 °C

ತಹಶೀಲ್ದಾರ್‌ ಕೊಲೆ ಪ್ರಕರಣ: ಉನ್ನತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಹಶೀಲ್ದಾರ್‌ ಚಂದ್ರಮೌಳೇಶ್ವರ ಕೊಲೆ ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಚಂದ್ರಮೌಳೇಶ್ವರ ಅವರ ಸ್ಮರಣಾರ್ಥ ಮೆಕ್ಕೆ ವೃತ್ತದಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಭಟನಾಕಾರರು, ‘ತಹಶೀಲ್ದಾರ್ ಕೊಲೆ ಪ್ರಕರಣದಿಂದ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ತಹಶೀಲ್ದಾರ್‌ಗೆ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸ್ ಇಲಾಖೆ ವೈಫಲ್ಯವೇ ಕೊಲೆಗೆ ಕಾರಣ’ ಎಂದು ಆರೋಪಿಸಿದರು.

‘ಸರ್ಕಾರಿ ನೌಕರರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾನೂನು ರೂಪಿಸಬೇಕು. ತಹಶೀಲ್ದಾರ್‌ ಕೊಲೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ಶೀಘ್ರವೇ ಶಿಕ್ಷೆ ಆಗುವಂತೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ತೆರಳುವ ಅಧಿಕಾರಿಗಳಿಗೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಬೇಕು’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

‘ತಹಶೀಲ್ದಾರ್ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು. ಆರೋಪಿಯ ಜಮೀನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

ಗಲ್ಲು ಶಿಕ್ಷೆ: ತಹಶೀಲ್ದಾರ್‌ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಬೇಕೆಂದು ಭೋವಿ ಯುವ ವೇದಿಕೆ ತಾಲ್ಲೂಕು ಘಟಕದ ಸದಸ್ಯರು ಆಗ್ರಹಿಸಿದರು.

‘ಪ್ರಾಮಾಣಿಕ ಮತ್ತು ಸಜ್ಜನಿಕೆ ಅಧಿಕಾರಿಯೆಂದು ಹೆಸರು ಮಾಡಿದ್ದ ಚಂದ್ರಮೌಳೇಶ್ವರ ಅವರ ಕೊಲೆ ಪ್ರಕರಣವು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಾನತಿಗೆ ಆಗ್ರಹ: ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಕರ್ನಾಟಕ ದಲಿತ ಸಿಂಹ ಸೇನೆ ಸದಸ್ಯರು, ‘ಪೊಲೀಸರು ತಹಶೀಲ್ದಾರ್‌ಗೆ ಸೂಕ್ತ ರಕ್ಷಣೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಆದ ಕಾರಣ ಕರ್ತವ್ಯ ಲೋಪದ ಆರೋಪದ ಮೇಲೆ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು