ಸೋಮವಾರ, ಏಪ್ರಿಲ್ 19, 2021
31 °C
ಪಡಿತರ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ: ಆರೋಪ

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಚುನಾವಣೆಯಲ್ಲಿ ರೈತರ ಪರವಾಗಿ ಮಾತನಾಡಿದ್ದ ರಾಜ್ಯ ಸರ್ಕಾರ ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ವಿಫಲವಾಗಿದೆ ಎಂದು ದೂರಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
ನಡೆಸಿದರು.

ನಗರಸಭೆ ಸದಸ್ಯ ಪಿ.ತಂಗರಾಜ್‌ ಮಾತನಾಡಿ, ‘ನಾವು ಗೆದ್ದು ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ, ರೈತರ ಬೆಳೆಗೆ ಉತ್ತಮ ಬೆಲೆ ಕೊಡುತ್ತೇವೆ. ಬಗರಂ ಹುಕುಂ ಸಾಗುವಳಿ ಚೀಟಿ ವಿತರಿಸುತ್ತೇವೆ. ಬಡವರಿಗೆ ನಿವೇಶನಗಳನ್ನು ನೀಡುತ್ತೇವೆ ಎಂಬ ರೀತಿಯಲ್ಲಿ ಹಲವಾರು ಆಶ್ವಾಸನೆ ನೀಡಲಾಯಿತು. ಅವರ ಮಾತನ್ನು ನಂಬಿದ ಜನ ಅವರಿಗೆ ಮತ ಹಾಕಿ ಅಧಿಕಾರಕ್ಕೆ ತಂದರು. ಆದರೆ ಸರ್ಕಾರ ಬಂಡವಾಳಶಾಹಿಗಳ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ. ಕಾರ್ಪೋರೇಟ್‌ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆ. ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಸಿದೆ. ಕೃಷಿಯನ್ನು ದುಬಾರಿ ಉದ್ಯಮವನ್ನಾಗಿ ಮಾಡಲು ಹೊರಟಿದೆ. ಎಲ್ಲವನ್ನೂ ಖಾಸಗಿಯವರ ಕೈಗೆ ಒಪ್ಪಿಸಿ, ಬಡವರು, ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ. ಈಗ ಗೋಹತ್ಯೆ ನಿಷೇಧ ಕಾಯ್ದೆ ತಂದಿದೆ. ಗೋವಿಗೆ 13 ವರ್ಷ ತುಂಬಿದರೆ ಮಾತ್ರ ಮಾರಾಟ ಮಾಡಬಹುದು. ಕೃಷಿಕರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸ್ವಾತಂತ್ರ್ಯ ಇರುವುದಿಲ್ಲ. ದನದ ಮಾಂಸ ತಿನ್ನುವ ವರ್ಗಕ್ಕೆ ಅನ್ಯಾಯ ಮಾಡಲು ಹೊರಟಿದೆ’ ಎಂದು ತಂಗರಾಜ್‌
ದೂರಿದರು.

ತಹಶೀಲ್ದಾರ್ ಕೆ.ಎನ್‌.ಸುಜಾತ ಅವರಿಗೆ ಬೇಡಿಕೆಯ ಪಟ್ಟಿಯನ್ನು ನೀಡಲಾಯಿತು. ಮುಖಂಡರಾದ ಕೆ.ಎಂ.ವೆಂಕಟೇಶ, ಕೆ.ಎನ್‌.ಮುನಿವೆಂಕಟೇಗೌಡ, ರಾಜಾರೆಡ್ಡಿ, ಪಿ.ರಾಮಮೂರ್ತಿ, ಸುರೇಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.