ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಗಣತಿಗೆ ಸಾರ್ವಜನಿಕರು ಸಹಕರಿಸಿ

ಪಾರದರ್ಶಕ ಮಾಹಿತಿ ಕೊಡಿ: ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ
Last Updated 9 ಜನವರಿ 2020, 13:48 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯದವರೆಗೆ 7ನೇ ಆರ್ಥಿಕ ಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಪಾರದರ್ಶಕ ಮಾಹಿತಿ ನೀಡುವ ಮೂಲಕ ಗಣತಿಗೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಜನಗಣತಿ ಸಂಬಂಧ ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ದೇಶದ ಸರ್ವತ್ತೋಮುಖ ಬೆಳವಣಿಗೆಗೆ ರೂಪಿಸುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೀತಿ ರಚನೆಗೆ ಆರ್ಥಿಕ ಗಣತಿಯ ಅಂಕಿ-ಅಂಶವೇ ಆಧಾರ’ ಎಂದು ಹೇಳಿದರು.

‘ಪ್ರತಿ 5 ವರ್ಷಕ್ಕೊಮ್ಮೆ ದೇಶದೆಲ್ಲೆಡೆ ಆರ್ಥಿಕ ಗಣತಿ ಕಾರ್ಯ ನಡೆಯುತ್ತದೆ. ಮೊದಲ ಆರ್ಥಿಕ ಗಣತಿಯು 1977ರಲ್ಲಿ ನಡೆದಿತ್ತು. ಈವರೆಗೆ 6 ಆರ್ಥಿಕ ಗಣತಿ ನಡೆದಿವೆ. ಇದೀಗ 7ನೇ ಗಣತಿ ಚಾಲನೆಯಲ್ಲಿದೆ. ಜಿಲ್ಲೆಯಲ್ಲಿ ಆರ್ಥಿಕ ಗಣತಿ ಕಾರ್ಯಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ವಿವರಿಸಿದರು.

‘ಆರ್ಥಿಕ ಗಣತಿ ಕಾರ್ಯದಲ್ಲಿ ಗ್ರಾಮೀಣ ಹಾಗೂ ಖಾಸಗಿ ವಲಯದಲ್ಲಿನ ಸಂಘಟಿತ ಮತ್ತು ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆ ಪರಿಗಣಿಸಲಾಗುತ್ತದೆ. ಈ ಕಾರ್ಯದಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಗಣತಿ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆ, ಕಟ್ಟಡಕ್ಕೆ ಭೇಟಿ ಕೊಟ್ಟು ಉದ್ಯಮ, ವ್ಯಾಪಾರ, ಕೆಲಸಗಾರರ ಮಾಹಿತಿ, ಉದ್ದಿಮೆಯ ಹಣಕಾಸಿನ ಮೂಲದ ಮಾಹಿತಿ ಕಲೆ ಹಾಕಬೇಕು. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮ ಮತ್ತು ಯೋಜನೆ ರೂಪಿಸಲು ಉಪಯೋಗಿಸಲಾಗುತ್ತದೆ. ಜತೆಗೆ ಮಾಹಿತಿ ಗೋಪ್ಯವಾಗಿ ಇಡಲಾಗುವುದು. ಮಾಹಿತಿಯನ್ನು ಜನರ ತಲಾ ಆದಾಯ ಹಾಗೂ ರಾಷ್ಟ್ರೀಯ ಆದಾಯದ ಲೆಕ್ಕಾಚಾರಕ್ಕೆ ಬಳಸಲಾಗುವುದು’ ಎಂದರು.

ಗುರುತಿನ ಚೀಟಿ

‘ಸೇವಾ ಕೇಂದ್ರಗಳಲ್ಲಿ ಗಣತಿದಾರರಿಗೆ ಗುರುತಿನ ಚೀಟಿ ನೀಡಲಾಗಿರುತ್ತದೆ. ಗಣತಿ ಕಾರ್ಯಕ್ಕೆ 446 ಕಾರ್ಯಕರ್ತರು ಮತ್ತು 120 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜಿಲ್ಲೆಯ 1,867 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ 748 ಬ್ಲಾಕ್‌ಗಳಲ್ಲಿ ಗಣತಿ ಕಾರ್ಯ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ವರ್ಷ ವಿಶೇಷವಾಗಿ ಕಾಗದರಹಿತವಾಗಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಗಣತಿದಾರರು ಮಾಹಿತಿ ಸಂಗ್ರಹಿಸಲು ಬಂದಾಗ ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಕೋರಿದರು.

‘ಜಿಲ್ಲೆಯ ಇಬ್ಬರು ಪ್ರಧಾನ ತರಬೇತಿದಾರರಿಗೆ ಆರ್ಥಿಕ ಗಣತಿ ಸಂಪೂರ್ಣ ಪ್ರಕ್ರಿಯೆ ಕುರಿತು ತರಬೇತಿ ಕೊಡಿಸಲಾಗಿದೆ. ಜಿಲ್ಲೆಯಲ್ಲಿ 31 ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ನಡೆಯುವ ಜನಗಣತಿ ಕಾರ್ಯಕ್ಕೆ ನೇಮಿಸಲಾಗಿದೆ. ಅಲ್ಲದೇ, 52 ಕ್ಷೇತ್ರ ತರಬೇತುದಾರರನ್ನು ನಿಯೋಜಿಸಲಾಗಿದೆ. ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ ಫೋನ್‌ ಬಳಕೆ ಜ್ಞಾನ ಹೊಂದಿರುವವರನ್ನು ಗಣತಿಗೆ ಆಯ್ಕೆ ಮಾಡಲಾಗಿದೆ’ ಎಂದು ವಿವರಿಸಿದರು.

ಮೊಬೈಲ್ ಆ್ಯಪ್‌

‘ಈವರೆಗೂ ಅರ್ಜಿ ನಮೂನೆಗಳನ್ನು ಗಣತಿ ಅಧಿಕಾರಿಗಳು ತಾವೇ ಖುದ್ದು ಭರ್ತಿ ಮಾಡುತ್ತಿದ್ದರು. ನಂತರ ಆ ನಮೂನೆಗಳನ್ನು ಉನ್ನತ ಅಧಿಕಾರಿಗಳ ಅನುಮೋದನೆಗೆ ಸಲ್ಲಿಸಲು ಬಹಳ ಸಮಯ ಹಿಡಿಯುತ್ತಿತ್ತು. ಆದರೆ, ಈ ಬಾರಿ ತಂತ್ರಜ್ಞಾನ ಆಧಾರಿತ ಮೊಬೈಲ್ ಆ್ಯಪ್‌ ಮೂಲಕ ಗಣತಿ ಮಾಹಿತಿಯನ್ನು ನೇರವಾಗಿ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ವಿ ದರ್ಶನ್, ಮುಖ್ಯ ಯೋಜನಾಧಿಕಾರಿ ಎಂ.ಮಾದೇಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್.ಧನಂಜಯ, ಸಹಾಯಕ ನಿರ್ದೇಶಕ ವೆಂಕಟರವಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT