ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಇಳಿ ವಯಸ್ಸಿನಲ್ಲೂ ಸ್ಫೂರ್ತಿಯ ಚಿಲುಮೆ ಪುಷ್ಪಲತಾ

Last Updated 27 ಜನವರಿ 2023, 5:05 IST
ಅಕ್ಷರ ಗಾತ್ರ

ಬಂಗಾರಪೇಟೆ: ಇಳಿ ವಯಸ್ಸಾದರೂ ಕ್ರೀಡಾ ಆಸಕ್ತಿ ತೋರುತ್ತಾ 5,000 ಮೀಟರ್ ವಿಭಾಗದಲ್ಲಿ ರಾಜ್ಯ ಮಟ್ಟದ ಮಾಸ್ಟರ್ಸ್‌ ನಡಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗೆಲ್ಲುತ್ತಿರುವ ಬೆಮಲ್, ಭಾರತನಗರದ ಬಿ.ಸಿ.ಪುಷ್ಪಲತಾ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ.

ಉಡುಪಿ, ಮೈಸೂರು ಹಾಗೂ ಗೋವಾದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ್ದಾರೆ. ಇಷ್ಟು ಕ್ರೀಡಾಕೂಟಗಳು ಮಳೆಯಲ್ಲಿ ನಡೆದಿದ್ದು, ನೆನೆಯುತ್ತಲೇ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕ ಗೆದ್ದಿರುವುದು ವಿಶೇಷ.

ಕಳೆದ ವರ್ಷ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಮೈಸೂರಿನಲ್ಲಿ ಆಯೋಜಿಸಿದ್ದ ಅಥ್ಲೆಟಿಕ್ಸ್‌ನಲ್ಲಿ 60 ವರ್ಷ ಮೇಲಿನವರ ವಿಭಾಗದಲ್ಲಿ 100 ಮೀ ಓಟದಲ್ಲಿ ಪ್ರಥಮ, 5 ಕಿ.ಮೀ. ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರು.

ರಾಷ್ಟ್ರಮಟ್ಟ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಪುಷ್ಪಲತಾ 100 ಮೀ., 200 ಮೀ. ನಡಿಗೆ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ. ನಿತ್ಯ 2–3 ತಾಸು ಅಭ್ಯಾಸ ಮಾಡುತ್ತಿದ್ದಾರೆ. ಬೆಳಿಗ್ಗೆ 5 ರಿಂದ 6ಗಂಟೆ, ಸಂಜೆ 4.30 ರಿಂದ 6 ಗಂಟೆ ಅವಧಿಯಲ್ಲಿ ಅಭ್ಯಾಸ ನಡೆಸುತ್ತಾರೆ.

ಶಾಲಾ ದಿನಗಳಿಂದಲೂ ಇವರಿಗೆ ಕ್ರೀಡೆ ಅಚ್ಚುಮೆಚ್ಚು. ಶಾಲಾ ಕಾಲೇಜಿನಲ್ಲಿ ಆಯೋಜಿಸುತ್ತಿದ್ದ ನಡಿಗೆ, ಕೊಕ್ಕೊ, ಥ್ರೋಬಾಲ್, ಡಿಸ್ಕಸ್‌ ಥ್ರೋ ಹಾಗೂ ಓಟದ ಸ್ಪರ್ಧೆಗಳಲ್ಲಿ ಮಂಚೂಣಿಯಲ್ಲಿ ಇರುತ್ತಿದ್ದರು.

ಶಿಕ್ಷಕರಾಗಿ ಆಯ್ಕೆಗೊಂಡ ಬಳಿಕ ಬೋಧನೆ ಜತೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲದೇ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಸಾಧನೆ ಮಾಡಿರುವುದು ಇವರ ಪ್ರತಿಭೆಗೆ ಹಿಡಿದ ಕನ್ನಡ. ಎಂ.ಎ, ಬಿ.ಎಡ್ ಪೂರೈಸಿರುವ ಇವರು ಮೂರು ಬಾರಿ ಉತ್ತಮ ಶಿಕ್ಷಕಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇವರು ಕಾರ್ಯ ನಿರ್ವಹಿಸಿದ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾಗಿದ್ದರು ಎನ್ನುವುದು ಶಿಕ್ಷಣ ಅಧಿಕಾರಿಗಳ ನುಡಿ.

ವಯಸ್ಸು ಮರೆತು ಹೋಗುತ್ತದೆ: ‘ಕ್ರೀಡೆ ಶರೀರಕ್ಕೆ ಚೈತನ್ಯ, ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಕ್ರೀಡಾಂಗಣಕ್ಕೆ ಇಳಿದರೆ ವಯಸ್ಸು ಎನ್ನುವ ಪರಿಕಲ್ಪನೆಯೇ ಮರೆತುಬಿಡುತ್ತೇನೆ’ ಎನ್ನುತ್ತಾರೆ ಪುಷ್ಪಲತಾ. ಇವರಲ್ಲಿನ ಕ್ರೀಡಾ ಪ್ರತಿಭೆ, ಬದ್ಧತೆ, ಶಿಕ್ಷಕ ವೃತ್ತಿ ಕೌಶಲ ಗುರುತಿಸಿದ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಜನಪ್ರತಿನಿಧಿಗಳ ಸನ್ಮಾನಕ್ಕೂ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT