ಸೋಮವಾರ, ಜೂನ್ 14, 2021
20 °C
ಮಾನವೀಯ ಗುಣವುಳ್ಳ ಆದರ್ಶ ವ್ಯಕ್ತಿ

ರಾಜ್‌ಕುಮಾರ್ ರಾಜ್ಯದ ಸಾಂಸ್ಕೃತಿಕ ರಾಯಭಾರಿ: ಜಿಲ್ಲಾಧಿಕಾರಿ ಸೆಲ್ವಮಣಿ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಚಿತ್ರನಟ ದಿವಂಗತ ರಾಜ್‌ಕುಮಾರ್ ಅವರು ಕನ್ನಡದ ಮೇರು ನಟ ಮಾತ್ರವಲ್ಲದೆ ರಾಜ್ಯದ ಸಾಂಸ್ಕೃತಿಕ ರಾಯಭಾರಿ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಬಣ್ಣಿಸಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್‌ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ರಾಜ್‌ಕುಮಾರ್‌ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ರಾಜ್‌ಕುಮಾರ್‌ ಅವರು ಅಭಿನಯಕ್ಕೆ ಮಾತ್ರ ಸೀಮಿತರಾಗದೆ ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರವಾಗಿ ಹೋರಾಟ ನಡೆಸಿ ಅನನ್ಯ ಕೊಡುಗೆ ನೀಡಿದ್ದಾರೆ. ಅವರು ಮಾನವೀಯ ಗುಣವುಳ್ಳ, ಸರಳತೆಯ ಪ್ರತೀಕ ಆದರ್ಶ ವ್ಯಕ್ತಿಯಾಗಿದ್ದರು’ ಎಂದು ಸ್ಮರಿಸಿದರು.

‘ಅಭಿಮಾನಿಗಳೇ ದೇವರು ಎಂದು ಕರೆದ ರಾಜ್‌ಕುಮಾರ್ ಸದಾ ಜನರ ಮಧ್ಯೆ ಇರುತ್ತಿದ್ದರು. ಅವರು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ರಾಜ್ಯದಲ್ಲಿ ಅವರ ಹೆಸರು ಗೊತ್ತಿರದವರು ಯಾರೂ ಇಲ್ಲ. ರಾಜ್‌ಕುಮಾರ್‌ರ ಶಿಸ್ತಿನ ಜೀವನ ಎಲ್ಲರಿಗೂ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.

‘ರಾಜ್‌ಕುಮಾರ್‌ ಚಿತ್ರರಂಗದ ಜತೆಗೆ ಕನ್ನಡಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದರು. ಅವರು ಅದ್ಭುತ ನಟನೆಯ ಜತೆಗೆ ಸರಳ ಜೀವನ ಶೈಲಿಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಶಿಸ್ತು, ಕರ್ತವ್ಯ ನಿಷ್ಠೆ, ಸರಳ ಜೀವನ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ರಾಜ್‌ಕುಮಾರ್‌ ತಮ್ಮ ನಟನೆಯ ಚಲನಚಿತ್ರಗಳಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರ್ಶಪ್ರಾಯ ಪಾತ್ರಗಳ ಮೂಲಕ ಅವರು ಯುವಕರಿಗೆ ಒಳ್ಳೆಯ ಸಂದೇಶ ನೀಡಿ ಮಾದರಿಯಾಗಿದ್ದಾರೆ. ಅವರ ಚಲನಚಿತ್ರಗಳು ಸಮಾಜಕ್ಕೆ ದಾರಿದೀಪವಾಗಿವೆ. ಅವರು ಎಂದಿಗೂ ವಿವಾದಾತ್ಮಕವಾಗಿ ಮಾತನಾಡಿದವರಲ್ಲ. ಅವರ ಸಿನಿಮಾ ನೋಡಿ ಯಾವುದೇ ವ್ಯಕ್ತಿ ಹಾಳಾಗಿರುವ ಉದಾಹರಣೆಯಿಲ್ಲ’ ಎಂದರು.

ಮೌಲ್ಯ ಬೆಳೆಸಬೇಕು: ‘ರಾಜ್‌ಕುಮಾರ್‌ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ತಮ್ಮ ಜೀವನದಲ್ಲಿ ಯೋಗಾಭ್ಯಾಸ ಮಾಡಿ ಆದರ್ಶವಾಗಿದ್ದರು. ಪೋಷಕರು ಮಕ್ಕಳಿಗೆ ರಾಜ್‌ಕುಮಾರ್‌ ಅಭಿನಯದ ಚಲನಚಿತ್ರಗಳನ್ನು ತೋರಿಸಿ ಮಾನವೀಯ ಮೌಲ್ಯ ಬೆಳೆಸಬೇಕು’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಸಲಹೆ ನೀಡಿದರು.

‘ರಾಜ್‌ಕುಮಾರ್‌ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೂ ಹಾಗೂ ಜಿಲ್ಲೆಗೂ ಅವಿನಾಭಾವ ಸಂಬಂಧವಿತ್ತು. ಗೋಕಾಕ್‌ ಚಳವಳಿ ಸಂದರ್ಭದಲ್ಲಿ ಅವರು ಜಿಲ್ಲೆಗೆ ಬಂದು ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದರು. ಅವರ ನೆನಪು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಿಸುತ್ತಿದೆ’ ಎಂದು ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಕೋ.ನಾ.ಪ್ರಭಾಕರ್ ತಿಳಿಸಿದರು.

ನೇತ್ರದಾನ ಕೇಂದ್ರ: ‘ರಾಜ್‌ಕುಮಾರ್‌ ತಮ್ಮ ಎರಡೂ ಕಣ್ಣು ದಾನ ಮಾಡಿ ನೇತ್ರದಾನಕ್ಕೆ ಒತ್ತು ಕೊಟ್ಟರು. ನೇತ್ರದಾನದಿಂದ ಅಂಧರು ಪ್ರಪಂಚ ನೋಡಲು ಅನುಕೂಲವಾಗುತ್ತದೆ. ಜಿಲ್ಲಾ ಕೇಂದ್ರದ ಎಸ್‌ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ನೇತ್ರದಾನ ಕೇಂದ್ರ ತೆರೆಯಬೇಕು ಮತ್ತು ಒಳಾಂಗಣ ಕ್ರೀಡಾಂಗಣಕ್ಕೆ ರಾಜ್‌ಕುಮಾರ್‌ರ ಹೆಸರು ಇಡಬೇಕು’ ಎಂದು ಮನವಿ ಮಾಡಿದರು.

ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅ.ಕೃ.ಸೋಮಶೇಖರ್, ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ಪಿ.ಸುನಿಲ್‌ರಾಜ್‌, ಭುವನೇಶ್ವರಿ ಕನ್ನಡ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್.ತ್ಯಾಗರಾಜ್‌ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು