ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನಗೊಂಡ ರಾಮಯ್ಯ ಕೆರೆ ಭರ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿನಿಧಿಗಳ ಸಂತಸ
Last Updated 4 ನವೆಂಬರ್ 2020, 14:44 IST
ಅಕ್ಷರ ಗಾತ್ರ

‌ಕೋಲಾರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನಗೊಳಿಸಿರುವ ತಾಲ್ಲೂಕಿನ ಸುಗಟೂರು ಗ್ರಾಮದ ರಾಮಯ್ಯ ಕೆರೆ ತುಂಬಿ ಕೋಡಿ ಹರಿಯುತ್ತಿರುವುದನ್ನು ಬುಧವಾರ ವೀಕ್ಷಿಸಿದ ಯೋಜನೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಜಿಲ್ಲೆಯ ಅನೇಕ ಕೆರೆಗಳಲ್ಲಿ ಹೂಳೆತ್ತಿ ಪುನಶ್ಚೇತನಗೊಳಿಸಲಾಗಿದೆ. ಅದೇ ರೀತಿ 2019–20ನೇ ಸಾಲಿನಲ್ಲಿ ರಾಮಯ್ಯ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು’ ಎಂದು ಚಂದ್ರಶೇಖರ್‌ ಹೇಳಿದರು.

‘ಸುಮಾರು 23 ಎಕರೆ ವಿಸ್ತಾರವಾಗಿರುವ ರಾಮಯ್ಯನ ಕೆರೆ ಪುನಶ್ಚೇತನಕ್ಕೆ ₹ 10 ಲಕ್ಷ ವೆಚ್ಚವಾಗಿತ್ತು. ಸುಗಟೂರು ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಕೆರೆಯಲ್ಲಿ ಹೂಳು ತೆಗೆಯಲಾಗಿತ್ತು’ ಎಂದು ತಿಳಿಸಿದರು.

‘ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಮತ್ತು ಕೆ.ಸಿ ವ್ಯಾಲಿ ನೀರು ಅಗ್ರಹಾರ ಕೆರೆಯಿಂದ ಹರಿದು ಬಂದು ಈ ಕೆರೆಗೆ ಸೇರಿರುವುದರಿಂದ ಈಗ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕಳೆದ 3 ವರ್ಷಗಳ ಹಿಂದೆ ಅರಾಭಿಕೊತ್ತನೂರು ಕೆರೆಯ ಹೂಳು ತೆಗೆದು ಪುನಶ್ಚೇತನಗೊಳಿಸಲಾಗಿತ್ತು. ಆ ಕೆರೆಯೂ ಭರ್ತಿಯಾಗಿದೆ’ ಎಂದರು.

‘ಜಿಲ್ಲೆಯ ನದಿ, ನಾಲೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಜಿಲ್ಲೆಗೆ ಕೆರೆಗಳೇ ಜೀವಾಳವಾಗಿವೆ. ಪ್ರಕೃತಿದತ್ತವಾದ ಕೆರೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೆ ನೆರವಾಗುತ್ತಿದ್ದಾರೆ’ ಎಂದು ವಿವರಿಸಿದರು.

ಸಾಮಾಜಿಕ ಕಾರ್ಯ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯ ಕೈಗೊಂಡಿದೆ. ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಅನಾಥರು ಹಾಗೂ ಅಸಹಾಯಕರಿಗೆ ಮಾಸಿಕ ವೇತನ ನೀಡುತ್ತಿದೆ’ ಎಂದು ರಾಮಯ್ಯ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

‘ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಜಿಲ್ಲೆಯ ಬಗ್ಗೆ ಕಾಳಜಿ ತೋರಿದ್ದು, ನಮ್ಮ ಗ್ರಾಮದ ಕೆರೆ ಪುನಶ್ಚೇತನಗೊಳಿಸಿದ್ದಾರೆ. ಈ ಕೆರೆ ತುಂಬಿ 16 ವರ್ಷವಾಗಿತ್ತು, ಇದೀಗ ಕೆರೆ ತುಂಬಿ ನೀರಿನಿಂದ ಕಂಗೊಳಿಸುತ್ತಿದ್ದು, ಸುತ್ತಮುತ್ತಲಿನ 70ಕ್ಕೂ ಹೆಚ್ಚು ಕೊಳವೆ ಬಾವಿಗಳು ಜಲ ಮರುಪೂರಣಗೊಂಡಿವೆ. ರೈತರ ಬದುಕು ಹಸನಾಗಿಸಲು ಶ್ರಮಿಸಿದ ಯೋಜನೆ ಪ್ರತಿನಿಧಿಗಳಿಗೆ ಗ್ರಾಮಸ್ಥರು ಚಿರಋಣಿಯಾಗಿದ್ದೇವೆ’ ಎಂದರು.

‘ಕೆರೆ ತುಂಬಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗಿದೆ. ಕೆರೆ ಉಳಿಸಲು ಗ್ರಾಮಸ್ಥರು ಕೈಜೋಡಿಸಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಎಸ್.ಚಂದ್ರಶೇಖರ್ ಸಲಹೆ ನೀಡಿದರು,

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಎಸ್.ರಾಜೇಶ್, ಚಿಟ್ನಹಳ್ಳಿ ಗ್ರಾಮಸ್ಥ ಸಿ.ಬಿ.ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT