ಭಾನುವಾರ, ಆಗಸ್ಟ್ 1, 2021
21 °C
ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ

ಕೋಲಾರ: ತಮಿಳು ನಾಮಫಲಕ ತೆರವಿಗೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೆಜಿಎಫ್ ನಗರದಲ್ಲಿ ತಮಿಳು ನಾಮಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜುಲೈ 26ರಂದು ಕೆಜಿಎಫ್‍ಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಜಿಎಫ್ ಕನ್ನಡಿಗರ ಗಂಡು ಮೆಟ್ಟಿದ ನಾಡು. ಕನ್ನಡ ಅಭಿಮಾನಿಗಳ ಅಪೇಕ್ಷೆಯಂತೆ ಕೆಜಿಎಫ್‌ಗೆ ತೆರಳಿ, ತಮಿಳು ನಾಮಫಲಕಗಳಿಗೆ ಮಸಿ ಬಳಿಯಲಾಯಿತು. ಇನ್ನು ಮುಂದೆ ನಗರದ ನಾಮಫಲಕಗಳಲ್ಲಿ ಕನ್ನಡ ಭಾಷೆಯೇ ಇರಬೇಕೆಂದು ಆಗ್ರಹಿಸಿದ್ದೆವು. ಆದರೆ, ನಗರಸಭೆಯಲ್ಲಿ ಏಕಾಏಕಿ ತೀರ್ಮಾನ ಕೈಗೊಂಡು ಮತ್ತೆ ತಮಿಳು ಭಾಷೆಗೆ ಅವಕಾಶ ನೀಡಿರುವುದಲ್ಲದೆ ನಮ್ಮ ಮೇಲೆ ಸವಾಲು ಹಾಕಿದ್ದಾರೆ. ಇದು ಸವಾಲಿನ ಪ್ರಶ್ನೆಯಲ್ಲ ಎಂದು ಹೇಳಿದರು.

ಪ್ರಾಮಾಣಿಕ ಉದ್ದೇಶದಿಂದ ಮಸಿ ಬಳಿಯಲಾಗಿದೆ. ಅದನ್ನು ಅರಿತು ಗೌರವ ಸಲ್ಲಿಸಬೇಕಿದ್ದ ನಗರಸಭೆಯು ವೀರಾವೇಷದಿಂದ ನಾಮಫಲಕಗಳನ್ನು ತಮಿಳಿನಲ್ಲಿ ಬರೆಯಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತಮಿಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮಾತನಾಡಿದ್ದಾರೆ. ಅದಕ್ಕೆಲ್ಲ ತಾವು ಚಿಂತಿಸುವುದಿಲ್ಲ ಎಂದರು.
ಶಾಸಕರು, ಸಂಸದರು ಈ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣೆ ಗಿಮಿಕ್‍ಗಾಗಿ ಸುಮ್ಮನಿದ್ದಾರೆ. ಸರ್ಕಾರದ ನೀತಿ ಸ್ಪಷ್ಟವಾಗಿ ಗೊತ್ತಿದ್ದರೆ ತಮಿಳು ನಾಮಫಲಕಗಳನ್ನು ತೆಗೆಯಬೇಕು. ಓಟಿಗಾಗಿ ಜನಪ್ರತಿನಿಧಿಗಳು ಈ ರೀತಿ ಮೌನಕ್ಕೆ ಶರಣಾಗಿದ್ದು, ಪ್ರಾಮಾಣಿಕವಾಗಿ ತಮಿಳು ತೆಗೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸತ್ತು ಹೋಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವರ್ಷಕ್ಕೆ ಒಮ್ಮೆ ಸಮ್ಮೇಳನ ನಡೆಸಿ ಮೂರು ದಿನ ಊಟ ಹಾಕುವುದಕ್ಕೆ ಸೀಮಿತವಾಗಿ ಬಿಟ್ಟಿದೆ. ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿ ಬಳಿಯೂ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಎಲ್ಲ ಗೊತ್ತಿದ್ದರೂ ಸರ್ಕಾರ, ಸಿಎಂ, ವಿವಿಧ ಪ್ರಾಧಿಕಾರಗಳು, ಕಸಾಪ ಚಳಿಗೆ ಮಲಗಿಕೊಂಡಿವೆ. ಏನೇ ಆದರೂ ತಮಿಳು ನಾಮಫಲಕ ತೆಗೆಯೋವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕೆಜಿಎಫ್ ನಗರಸಭೆ ಆಡಳಿತ ಮಂಡಳಿಯಲ್ಲಿ ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೂಡಲೇ ಅದನ್ನು ಸೂಪರ್ ಸೀಡ್‌ ಮಾಡಿ ಕನ್ನಡಿಗರಿಗೆ ಅವಕಾಶ ನೀಡಬೇಕು. ತಮ್ಮ ಬೇಡಿಕೆ, ಹೋರಾಟ ಕುರಿತಾಗಿ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಅವರು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಈ ಚಳವಳಿಗೆ ಯಾರು ಯಾರು ವಿರೋಧ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಈ ಚಳವಳಿಗೆ ಬೇರೆ ಬಣ್ಣ ಕಟ್ಟುವುದು ಬೇಡ. ಇನ್ನು ಸ್ಥಳೀಯ ಶಾಸಕರಿಗೆ ವಿಚಾರದ ಬಗ್ಗೆ ಮಾಹಿತಿ ಕೊರತೆಯಿದ್ದು, ಚಾಮರಾಜನಗರದಲ್ಲಿ ತಮಿಳೇ ಇಲ್ಲ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ವಿರೋಧ ಮಾಡಲಾಗುತ್ತಿದೆ. ಭಾಷೆಗಳ ಬಳಕೆ ವಿಚಾರವಾಗಿ ಸರ್ಕಾರಕ್ಕೆ ಬುದ್ಧಿ ಇಲ್ಲ. ಸಚಿವರಿಗೆ ತಲೆ ಇಲ್ಲ.  ಕೆಜಿಎಫ್‍ನಲ್ಲಿ ಆರಂಭವಾಗಿರುವ ಚಳವಳಿಯನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್, ರೈಲ್ವೆಯಲ್ಲಿ ಹಿಂದಿ ಭಾಷೆ ಬಳಕೆ ವಿರುದ್ಧ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡ ಚಳವಳಿ ಪಕ್ಷದ ನಾರಾಯಣಸ್ವಾಮಿ, ರಾಮು, ಪಾರ್ಥಸಾರಥಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಕನ್ನಡಮಿತ್ರ ವೆಂಕಟಪ್ಪ, ಗಲ್‍ಪೇಟೆ ಸಂತೋಷ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು