ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗೆ ಭೂಮಿ ನೀಡಲು ಸಿದ್ಧ

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ
Last Updated 15 ಆಗಸ್ಟ್ 2020, 14:25 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇರುವಂತೆ ಕೋಲಾರದಲ್ಲೂ ಯೋಧರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರ ಜಿಲ್ಲೆಯಲ್ಲಿ ಯೋಧರ ಸ್ಮಾರಕವಿಲ್ಲ. ಹೀಗಾಗಿ ಜಿಲ್ಲಾ ಕೇಂದ್ರದ ಟೇಕಲ್ ರಸ್ತೆಯ ಉದ್ಯಾನದಲ್ಲಿ ಯೋಧರ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರದ ಬಳಿ 1,550 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗಿದೆ. ಬೆಂಗಳೂರು– ಚೆನ್ನೈ ನಡುವೆ ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಾಣವಾಗಲಿದ್ದು, ಇದರಿಂದ ಕೋಲಾರ ಜಿಲ್ಲೆಯು ಬೆಂಗಳೂರು ಮಾದರಿಯಲ್ಲೇ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

ಕಾಮಗಾರಿ ಕಳಪೆ: ‘ಜಿಲ್ಲಾ ಕೇಂದ್ರದಲ್ಲಿ ಅಮೃತ್‌ ಸಿಟಿ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಸಾಕಷ್ಟು ದೂರು ಬಂದಿವೆ. ಈ ಸಂಬಂಧ ನಾನು ಹಾಗೂ ಸಂಸದರು ದಾಖಲೆಪತ್ರ ಸಂಗ್ರಹಿಸುತ್ತಿದ್ದೇವೆ. ಕಾಮಗಾರಿ ಕಳಪೆಯಾಗಿರುವುದು ದೃಢಪಟ್ಟರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಜಾರಿಯಲ್ಲಿದ್ದ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಸಡಿಲಗೊಳಿಸಿದ್ದು, ಇಡೀ ಗ್ರಾಮ ಅಥವಾ ಬಡಾವಣೆ ಸೀಲ್‌ಡೌನ್ ಮಾಡುವ ಬದಲು ಸೋಂಕಿತರ ಮನೆಯ ಅಕ್ಕಪಕ್ಕ ಮಾತ್ರ ಸೀಲ್‌ಡೌನ್‌ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ನೀರು ಬರಲಿಲ್ಲ: ‘ಕೆ.ಸಿ ವ್ಯಾಲಿ ಯೋಜನೆ ನೀರು ನಿಗದಿತ ಪ್ರಮಾಣದಲ್ಲಿ ಜಿಲ್ಲೆಗೆ ಹರಿಯುತ್ತಿಲ್ಲ. ನಿರೀಕ್ಷೆಯಂತೆ ನೀರು ಬಾರದ ಕಾರಣ ಕೆರೆಗಳು ತುಂಬವುದು ತಡವಾಗಿದೆ. ಯೋಜನೆಯಲ್ಲಿ ಪ್ರಸ್ತಾಪಿಸಿದ ಪ್ರಮಾಣದಲ್ಲಿ ನೀರು ಹರಿಸಿದ್ದರೆ ಈ ವೇಳೆಗಾಗಲೇ ಬಹುಪಾಲು ಕೆರೆಗಳು ಭರ್ತಿಯಾಗುತ್ತಿದ್ದವು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

‘ಕೋಲಾರ ನಗರದ ನೀರಿನ ಸಮಸ್ಯೆ 2 ತಿಂಗಳಲ್ಲಿ ಬಗೆಹರಿಯಲಿದೆ. ಅಮ್ಮೇರಹಳ್ಳಿ, ಮಡೇರಹಳ್ಳಿ ಕೆರೆಗೆ ಕೆ.ಸಿ ವ್ಯಾಲಿ ನೀರು ಬಂದಿದ್ದು, ಸುತ್ತಮುತ್ತಲಿನ ಕೊಳವೆ ಬಾವಿಗಳು ಮರುಪೂರಣವಾಗುತ್ತವೆ. ನಂತರ ಹೊಸದಾಗಿ ಕೊಳವೆ ಬಾವಿ ಕೊರೆಸುವ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT