ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾಜು ಬಹಿಷ್ಕರಿಸಿ ರೀಲರ್‌ಗಳ ಪ್ರತಿಭಟನೆ

ಕಚ್ಚಾ ರೇಷ್ಮೆ ನೂಲಿನ ಬೆಲೆ ಕುಸಿತ: ರೈತರಿಗೆ ತಟ್ಟಿದ ಪ್ರತಿಭಟನೆ ಬಿಸಿ
Last Updated 16 ಮೇ 2020, 18:02 IST
ಅಕ್ಷರ ಗಾತ್ರ

ಕೋಲಾರ: ಕಚ್ಚಾ ರೇಷ್ಮೆ ನೂಲಿನ ಬೆಲೆ ಕುಸಿತದಿಂದ ಸಂಕಷ್ಟ ಎದುರಾಗಿದ್ದು, ಸರ್ಕಾರ ನೆರವಿಗೆ ಬರಬೇಕೆಂದು ಒತ್ತಾಯಿಸಿ ನೂಲು ಬಿಚ್ಚಾಣಿಕೆದಾರರು (ರೀಲರ್‌) ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕಿನ ಕ್ಯಾಲನೂರು ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಹರಾಜು ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.

ಗೂಡು ಮಾರುಕಟ್ಟೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳ ಮನವೊಲಿಕೆಗೂ ಜಗ್ಗದ ರೀಲರ್‌ಗಳು ಇಡೀ ದಿನ ಹರಾಜು ನಡೆಸಲಿಲ್ಲ. ರೀಲರ್‌ಗಳ ದಿಢೀರ್‌ ಪ್ರತಿಭಟನೆಯಿಂದಾಗಿ ಮಾರುಕಟ್ಟೆಯಲ್ಲಿ ಗೂಡು ಹರಜಾಗದೆ ರೈತರಿಗೆ ತೀವ್ರ ತೊಂದರೆಯಾಯಿತು.

ರೇಷ್ಮೆ ಬೆಳೆಗಾರರು ಪ್ರತಿನಿತ್ಯದಂತೆ ಮಾರುಕಟ್ಟೆಗೆ ಬೆಳಿಗ್ಗೆ ಗೂಡು ಸಾಗಿಸಿಕೊಂಡು ಬಂದಿದ್ದರು. ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ಹರಾಜು ಚೀಟಿ ಸಹ ನೀಡಿದ್ದರು. ಆದರೆ, ರೀಲರ್‌ಗಳು ಮಾರುಕಟ್ಟೆಗೆ ಬಂದರೂ ಹರಾಜು ಪ್ರಕ್ರಿಯೆಯಿಂದ ದೂರ ಉಳಿದರು.

‘ಲಾಕ್‌ಡೌನ್‌ ನಡುವೆಯೂ ರೀಲರ್‌ಗಳು ಕಷ್ಟಪಟ್ಟು 50 ದಿನಗಳಿಂದ ಗೂಡು ಖರೀದಿಸಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೂಲು ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೆ.ಜಿ ರೇಷ್ಮೆ ನೂಲಿಗೆ ₹ 1,600ರಿಂದ 2,700 ಬೆಲೆ ಸಿಕ್ಕಿದರೆ ರೈತರಿಗೆ ಪ್ರತಿ ಕೆ.ಜಿ ಗೂಡಿಗೆ ₹ 320 ನೀಡಬಹುದು. ಆದರೆ, ಈಗ ಮಾರುಕಟ್ಟೆಯಲ್ಲಿ ನೂಲು ಧಾರಣೆಯೇ ಕುಸಿದಿದೆ’ ಎಂದು ಜಿಲ್ಲಾ ರೀಲರ್‌ಗಳ ಒಕ್ಕೂಟದ ಅಧ್ಯಕ್ಷ ಅನ್ಸರ್ ಪಾಷಾ ಹೇಳಿದರು.

‘ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ) ಅಧಿಕಾರಿಗಳು ಪ್ರತಿ ರೀಲರ್‌ನಿಂದ ವಾರಕ್ಕೆ 20 ಕೆ.ಜಿ ನೂಲು ಖರೀದಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಒಬ್ಬ ರೀಲರ್ ವಾರಕ್ಕೆ 100 ಕೆ.ಜಿ ನೂಲು ತೆಗೆಯುತ್ತಾನೆ. ರೀಲರ್ ಈ ನೂಲನ್ನು ಏನು ಮಾಡಬೇಕು. ನೂಲಿಗೂ ಗ್ರೇಡ್ ನಿಗದಿಪಡಿಸಿರುವ ಕ್ರಮ ಸಹ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಷ್ಟವಾಗುತ್ತದೆ: ‘ಕೊರೊನಾ ಹಿನ್ನೆಲೆಯಲ್ಲಿ ಕೆಎಸ್‌ಎಂಬಿ ರೀಲರ್‌ಗಳಿಂದ ಸಂಪೂರ್ಣವಾಗಿ ನೂಲು ಖರೀದಿಸಬೇಕು. ಸರ್ಕಾರ ರೇಷ್ಮೆ ನೂಲಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ದಾರದ ಗುಣಮಟ್ಟ ಆಧರಿಸಿ ವಾರಕ್ಕೆ 50 ಕೆ.ಜಿ ದಾರ ಖರೀದಿಸಿ ಹಣ ನೀಡಬೇಕು. ಇಲ್ಲವಾದರೆ ನಮಗೆ ನಷ್ಟವಾಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ಗೂಡು ಹರಾಜಿನಲ್ಲಿ ಭಾಗಿಯಾಗುವುದಿಲ್ಲ’ ಎಂದು ಧರಣಿನಿರತ ರೀಲರ್‌ಗಳು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT