ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ನಿರೀಕ್ಷಕನ ಅಮಾನತಿಗೆ ವರದಿ

ಲಂಚದ ದಂಧೆಗೆ ತಹಶೀಲ್ದಾರ್‌ರ ಸರ್ಕಾರಿ ವಾಹನ ಬಳಕೆ
Last Updated 2 ಮಾರ್ಚ್ 2020, 13:46 IST
ಅಕ್ಷರ ಗಾತ್ರ

ಕೋಲಾರ: ತಹಶೀಲ್ದಾರ್‌ರ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡು ಮರಳು ಸಾಗಣೆ ಲಾರಿ ಮಾಲೀಕರಿಂದ ಲಂಚ ಪಡೆದು ಸಿಕ್ಕಿಬಿದ್ದಿರುವ ತಾಲ್ಲೂಕಿನ ವಕ್ಕಲೇರಿ ಹೋಬಳಿ ಕಂದಾಯ ನಿರೀಕ್ಷಕ ಮಂಜುನಾಥ್‌ರನ್ನು ಅಮಾನತು ಮಾಡುವಂತೆ ತಹಶೀಲ್ದಾರ್‌ ಶೋಭಿತಾ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಮಂಜುನಾಥ್‌ ವಿರುದ್ಧ ತಹಶೀಲ್ದಾರ್‌ ನಗರದ ಗಲ್‌ಪೇಟೆ ಠಾಣೆಗೆ ದೂರು ಕೊಟ್ಟಿದ್ದು, ಮಂಜುನಾಥ್‌ ಈವರೆಗೂ ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ. ಅಲ್ಲದೇ, ಪ್ರಕರಣ ಸಂಬಂಧ ತಹಶೀಲ್ದಾರ್‌ ನೀಡಿರುವ ನೋಟಿಸ್‌ಗೂ ಹಿಂಬರಹ ನೀಡಿಲ್ಲ.

ಈ ನಡುವೆ ಲಂಚ ಪ್ರಕರಣದಲ್ಲಿ ತಹಶೀಲ್ದಾರ್‌ ಸಹ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಅಮಾನತುಗೊಡಿರುವ ತಹಶೀಲ್ದಾರ್‌ರ ಕಾರು ಚಾಲಕ ಶ್ರೀನಿವಾಸ್‌, ತಾಲ್ಲೂಕು ಕಚೇರಿ ಡಿ ಗ್ರೂಪ್‌ ಸಿಬ್ಬಂದಿ ಚಂದ್ರು ಮತ್ತು ಜಗದೀಶ್‌ ಅವರು, ‘ತಹಶೀಲ್ದಾರ್‌ರ ಅಣತಿಯಂತೆ ಮರಳು ಮತ್ತು ಕಲ್ಲು ಸಾಗಣೆ ಲಾರಿಗಳನ್ನು ತಡೆದು ಲಂಚ ವಸೂಲಿ ಮಾಡುತ್ತಿದ್ದೆವು. ಲಂಚದಲ್ಲಿ ತಹಶೀಲ್ದಾರ್‌ಗೂ ಪಾಲು ಕೊಡುತ್ತಿದ್ದೆವು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ತಹಶೀಲ್ದಾರ್‌ ಪೂರ್ವಾನುಮತಿ ಪಡೆದ ನಂತರವೇ ಸರ್ಕಾರಿ ವಾಹನ ತೆಗೆದುಕೊಂಡು ಹೋಗಿದ್ದೆವು. ಆದರೆ, ಅವರು ಹಿರಿಯ ಅಧಿಕಾರಿಗಳ ಶಿಸ್ತುಕ್ರಮದಿಂದ ಪಾರಾಗಲು ನಮ್ಮನ್ನು ಬಲಿಪಶು ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ತಹಶೀಲ್ದಾರ್‌ ಶೋಭಿತಾ, ‘ಲಂಚ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಮಂಜುನಾಥ್‌ ಮತ್ತು ಶ್ರೀನಿವಾಸ್‌ ಅನುಮತಿ ಪಡೆಯದೆ ನಾಲ್ಕೈದು ತಿಂಗಳಿಂದ ನನ್ನ ವಾಹನ ದುರ್ಬಳಕೆ ಮಾಡಿಕೊಂಡು ಲಂಚ ವಸೂಲಿ ಮಾಡಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ವರದಿ ನೀಡಿದ್ದೇನೆ: ‘ಮಂಜುನಾಥ್‌ ಮತ್ತು ಶ್ರೀನಿವಾಸ್‌ ಲಂಚ ವಸೂಲಿಗಾಗಿ ಫೆ.27ರಂದು ರಾತ್ರಿ ನನ್ನ ಸರ್ಕಾರಿ ವಾಹನ ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿಗೆ ಹೋಗಿದ್ದಾಗ ವಾಹನಸಮೇತ ಸಿಕ್ಕಿಬಿದ್ದಿದ್ದಾರೆ. ಮರು ದಿನವೇ ಶ್ರೀನಿವಾಸ್‌ ಹಾಗೂ ಡಿ ಗ್ರೂಪ್‌ ಸಿಬ್ಬಂದಿಯನ್ನು ಅಮಾನತು ಮಾಡಿದ್ದೇನೆ. ತಪ್ಪಿತಸ್ಥ ಮಂಜುನಾಥ್‌ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅವರ ವಿರುದ್ಧ ಜಿಲ್ಲಾಧಿಕಾರಿಗೆ ವರದಿ ನೀಡಿದ್ದೇನೆ’ ಎಂದು ಹೇಳಿದರು.

ಘಟನಾ ದಿನ ರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌ ಮತ್ತು ತಹಶೀಲ್ದಾರ್‌ ಮರಳು ಸಾಗಣೆ ಲಾರಿಯನ್ನು ಬಿಟ್ಟು ಕಳುಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT