ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತೂರು: ₹ 100 ಕೋಟಿ ಸಾಲಕ್ಕೆ ಮನವಿ-ಶಾಸಕ ನಾರಾಯಣಸ್ವಾಮಿ ಹೇಳಿಕೆ

ಮಹಿಳೆಯರ ಕಣ್ಣೀರು ಒರೆಸುವ ಡಿಸಿಸಿ ಬ್ಯಾಂಕ್‌: ಶಾಸಕ ನಾರಾಯಣಸ್ವಾಮಿ ಹೇಳಿಕೆ
Last Updated 26 ಆಗಸ್ಟ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲೇ ಅತಿ ದೊಡ್ಡದಾದ ಹುತ್ತೂರು ಹೋಬಳಿಯ ರೈತರು ಹಾಗೂ ಮಹಿಳೆಯರಿಗೆ ಕನಿಷ್ಠ ₹ 100 ಕೋಟಿ ಸಾಲ ನೀಡಬೇಕು’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್, ಹುತ್ತೂರು ಹೋಬಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ, ಮತ್ತು ರೈತರಿಗೆ ₹ 6.23 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಕೋವಿಡ್‌ ಕಾರಣಕ್ಕೆ ಸಾಲ ಮನ್ನಾ ಆಗುತ್ತದೆ ಎಂದು ಹೇಳುವವರ ಮಾತು ಕೇಳಬೇಡಿ. ಇದು ಬಡ್ಡಿರಹಿತ ಸಾಲವಾಗಿದ್ದು, ಯಾವುದೇ ಕಾರಣಕ್ಕೂ ಮನ್ನಾ ಆಗಲ್ಲ. ಸಕಾಲಕ್ಕೆ ಸಾಲದ ಕಂತು ಪಾವತಿಸದಿದ್ದರೆ ಬಡ್ಡಿ ಹೊರೆಗೆ ಸಿಲುಕುತ್ತೀರಿ’ ಎಂದು ಎಚ್ಚರಿಸಿದರು.

‘ಪುರುಷರು ಸಾಲ ಪಡೆದು ತೀರಿಸದೆ ಡಿಸಿಸಿ ಬ್ಯಾಂಕ್ ಮುಳುಗಿತ್ತು. ನಂತರ ಅಧ್ಯಕ್ಷ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯು ಬ್ಯಾಂಕನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿತು. ಆಡಳಿತ ಮಂಡಳಿಯು ಸಾಲದ ಸುಳಿಯಲ್ಲಿದ್ದ ಬ್ಯಾಂಕನ್ನು ಅಭಿವೃದ್ಧಿಪಡಿಸಿ ಲಕ್ಷಾಂತರ ಮಹಿಳೆಯರ ಕಣ್ಣೀರು ಒರೆಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಡಿಸಿಸಿ ಬ್ಯಾಂಕ್‌ ರಾಜ್ಯದಲ್ಲೇ ಇಂದು ಮೊದಲನೇ ಸ್ಥಾನದಲ್ಲಿದೆ. ಪ್ರತಿ ಹಳ್ಳಿಗೆ ಮೂರ್ನಾಲ್ಕು ಕೋಟಿ ಸಾಲ ಸಿಕ್ಕರೆ ಅನುಕೂಲವಾಗುತ್ತದೆ. ತಮ್ಮ ಭಾಗಕ್ಕೆ ಹೆಚ್ಚಿನ ಸಾಲ ನೀಡಬೇಕು. ಹುತ್ತೂರು ರೇಷ್ಮೆ ಬೆಳೆಗಾರರ ಸಂಘದ ಕಟ್ಟಡ ದುರಸ್ತಿಗೆ ₹ 5 ಲಕ್ಷ ಅನುದಾನ ನೀಡುತ್ತೇನೆ’ ಎಂದು ಘೋಷಿಸಿದರು.

‘ನಾನು ಈ ಭಾಗದಲ್ಲಿ 3 ಬಾರಿ ಶಾಸಕನಾಗಿದ್ದೆ. ಬೈರೇಗೌಡರು, ವೆಂಕಟಗಿರಿಯಪ್ಪ ಅವರು ಈಗ ಇಲ್ಲ. ಸಹಕಾರ ಸಂಸ್ಥೆಯಿಂದಲೇ ನಾನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ತಪ್ಪು ಸರಿಪಡಿಸಿದ್ದೇವೆ: ‘ವಡಗೂರು ಸೊಸೈಟಿಯಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಸೊಸೈಟಿಯಲ್ಲಿ ಆಗಿರುವ ತಪ್ಪನ್ನು ಜವಾಬ್ದಾರಿಯುತವಾಗಿ ಸರಿಪಡಿಸಿದ್ದೇನೆ. ನನ್ನಲ್ಲಿ ಪಕ್ಷ, ಜಾತಿ ಬೇಧವಿಲ್ಲ. ₹ 200 ಕೋಟಿ ಸಾಲ ಕೊಡಲು ಸಿದ್ಧವಿದ್ದೇವೆ. ಯಾವ ದೂರಿಗೂ ಜಗ್ಗಲ್ಲ. ಕಿರುಕುಳ ಸಹಿಸಿಕೊಂಡು ಬಂಡೆಯಾಗಿದ್ದೇನೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

‘ಹೆಚ್ಚು ಕೆಲಸ ಮಾಡುವವರಿಗೆ ಹೆಚ್ಚು ವಿರೋಧಿಗಳು. ಕೆಲಸ ಮಾಡದವರಿಗೆ ವಿರೋಧಿಗಳೇ ಇರುವುದಿಲ್ಲ.ಕೆಲವರು ಬ್ಯಾಂಕ್‌ನ ಅಭಿವೃದ್ಧಿ ಸಹಿಸದೆ ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ, ಕೆಲಸದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಗುಡುಗಿದರು.

ಸಾಲ ಹೆಚ್ಚಿಸಬೇಕು: ‘ರೈತರಿಗೆ ನೀಡುವ ಶೂನ್ಯ ಬಡ್ಡಿ ಕೆಸಿಸಿ ಸಾಲವನ್ನು ₹ 5 ಲಕ್ಷಕ್ಕೆ ಹೆಚ್ಚಿಸುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್ ಮನವಿ ಮಾಡಿದರು.

ವಡಗೂರು ಎಸ್ಎಫ್‌ಸಿಎಸ್ ಅಧ್ಯಕ್ಷ ವಿ.ರಾಮು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪ್ರಕಾಶ್, ವಡಗೂರು ಸೊಸೈಟಿ ನಿರ್ದೇಶಕರಾದ ನಾರಾಯಣಸ್ವಾಮಿ, ಸೀನಣ್ಣ, ರಮೇಶ್, ಕೃಷ್ಣಮೂರ್ತಿ, ಅಂಬರೀಶ್, ಚಂದ್ರಶೇಖರ್, ರಮೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT