ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 10 ಮೀಸಲಾತಿ ಜಾರಿಗೆ ಮನವಿ: ಸಚ್ಚಿದಾನಂದ ಮೂರ್ತಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೇಳಿಕೆ
Last Updated 6 ಆಗಸ್ಟ್ 2020, 15:48 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಘೋಷಿಸಿರುವ ಶೇ 10ರ ಮೀಸಲಾತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಜನಾಂಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಮನವಿ ಮಾಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶೇ 10ರ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ಮಂಡಳಿಯಿಂದ ಬ್ರಾಹ್ಮಣ ಸಮುದಾಯದಲ್ಲಿನ ಬಡ ಜನರ ಅಭಿವೃದ್ಧಿಗಾಗಿ 36 ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳಿಗೆ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ. ಯೋಜನೆಗಳಿಗೆ ಸೆ.1ರಿಂದ ಅರ್ಜಿ ಆಹ್ವಾನಿಸುತ್ತೇವೆ’ ಎಂದು ಮಾಹಿತಿ ನೀಡಿದರು.

‘ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಈವರೆಗೆ 4,800 ಮಂದಿ ಪ್ರಮಾಣಪತ್ರ ಪಡೆದಿದ್ದಾರೆ. ₹ 8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯದ ಮಕ್ಕಳಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸೌಲಭ್ಯಕ್ಕೆ ಅರ್ಹರು. ಕೇಂದ್ರದ ಶೇ 10ರ ಮೀಸಲಾತಿ ಹಾಗೂ ರಾಜ್ಯ ಸರ್ಕಾರದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಆಧರಿಸಿ ಸೌಲಭ್ಯ ನೀಡುತ್ತೇವೆ’ ಎಂದರು.

ವಸತಿ ಯೋಜನೆ: ‘ಅಡುಗೆ ಕೆಲಸಗಾರರು ಮತ್ತು ಪುರೋಹಿತರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಜನಾಂಗದ ಬಡವರಿಗೆ ವಸತಿ ಯೋಜನೆ ರೂಪಿಸಲು ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಅಗತ್ಯವಾದ ಶೇ 20ರಷ್ಟು ಆರಂಭಿಕ ಹಣವನ್ನು ನಿಗಮದಿಂದ ಭರಿಸುತ್ತೇವೆ’ ಎಂದು ವಿವರಿಸಿದರು.

‘ರಾಜ್ಯ ಸರ್ಕಾರದಿಂದ ಮಂಡಳಿಗೆ ₹ 300 ಕೋಟಿ ಅನುದಾನ ಕೋರಲಾಗಿದೆ. ಸರ್ಕಾರ ಮೊದಲ ಹಂತದಲ್ಲಿ ₹ 50 ಕೋಟಿ ನೀಡುವ ನಿರೀಕ್ಷೆಯಿದೆ. ರಾಜ್ಯದ 275ಕ್ಕೂ ಹೆಚ್ಚು ಸಾಫ್ಟ್‌ವೇರ್‌ ಕಂಪನಿಗಳ ಮಾಲೀಕರು ಹಾಗೂ 100 ಮಂದಿ ಚಾರ್ಟೆಡ್‌ ಅಕೌಂಟೆಂಟ್‌ಗಳು ಜನಾಂಗದ ಬಡವರ ನೆರವು ನೀಡಲು ಒಪ್ಪಿದ್ದಾರೆ’ ಎಂದು ತಿಳಿಸಿದರು.

ಜಾತಿ ಸಮೀಕ್ಷೆ: ‘ರಾಜ್ಯದಲ್ಲಿ 40 ಲಕ್ಷ ಬ್ರಾಹ್ಮಣರಿದ್ದಾರೆ. ಈ ಹಿಂದೆ ಜಾತಿ ಸಮೀಕ್ಷೆಯಲ್ಲಿ ಉಪ ಶಾಖೆಗಳ ಹೆಸರು ಬರೆಸಿರುವ ಕಾರಣ ಕೇವಲ 17 ಲಕ್ಷ ಜನಸಂಖ್ಯೆ ಎಂದು ಹೇಳಲಾಗುತ್ತಿದೆ. ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ಸಮುದಾಯದ ಎಲ್ಲರೂ ಬ್ರಾಹ್ಮಣ ಎಂದು ಬರೆಸಬೇಕು’ ಎಂದು ಮನವಿ ಮಾಡಿದರು.

ಮಂಡಳಿ ನಿರ್ದೇಶಕಿ ವತ್ಸಲಾ, ಜಿಲ್ಲಾ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಎನ್.ಕೆ.ಅಚ್ಯುತ, ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ಖಜಾಂಚಿ ಎಂ.ಪಿ.ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT