ಗುರುವಾರ , ಮಾರ್ಚ್ 4, 2021
18 °C
ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

ಜಿಲ್ಲೆಯಲ್ಲಿ ರೋಟಾವೈರಸ್ ಲಸಿಕೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದೆಲ್ಲೆಡೆ ಆಗಸ್ಟ್‌ ತಿಂಗಳಲ್ಲಿ ರೋಟಾವೈರಸ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲೂ ಇದೇ ಸಮಯದಲ್ಲಿ ಅಭಿಯಾನ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರೋಟಾವೈರಸ್ ಲಸಿಕೆ ಅಭಿಯಾನ ಕುರಿತು ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ರೋಟಾವೈರಸ್ ಒಬ್ಬರಿಂದ ಒಬ್ಬರಿಗೆ ಹರಡಬಲ್ಲ ವೈರಾಣುವಾಗಿದೆ. ಇದು ಹೆಚ್ಚಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ತಿಳಿಸಿದರು.

‘ರೋಟಾ ವೈರಾಣುವಿನಿಂದ ಮಕ್ಕಳಲ್ಲಿ ಅತಿಸಾರ ಭೇದಿ, ವಾಂತಿ, ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ರಾಜ್ಯದೆಲ್ಲೆಡೆ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ವೈರಸ್‌ ಉಂಟಾಗದಂತೆ ಹಾಗೂ ಹರಡದಂತೆ ತಡೆಯಲು ಸ್ವಚ್ಛತೆ ಕಾಪಾಡಬೇಕು. ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರು ಸೇವಿಸಬೇಕು’ ಎಂದು ಸಲಹೆ ನೀಡಿದರು.

‘ಜನರು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳ ಸ್ವಚ್ಛತೆಯ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು. ಆ.15 ರೊಳಗೆ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಬಾಯಿ ಮೂಲಕ ಲಸಿಕೆ: ‘ಈಗಾಗಲೇ ಜಗತ್ತಿನ 96 ದೇಶಗಳಲ್ಲಿ ರೋಟಾವೈರಸ್ ಲಸಿಕೆ ಬಳಸಲಾಗುತ್ತಿದೆ. ಭಾರತದ 19 ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮಗು ಜನಿಸಿದ 6, 10 ಮತ್ತು 14ನೇ ವಾರದೊಳಗೆ ಮಗುವಿಗೆ ಬಾಯಿ ಮೂಲಕ ಈ ಲಸಿಕೆ ನೀಡಲಾಗುವುದು’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ವಿವರಿಸಿದರು.

‘ರೋಟಾವೈರಸ್‌ ಲಸಿಕೆ ನೀಡುವುದರಿಂದ ಮಗುವಿನಲ್ಲಿ ಉಂಟಾಗಬಹುದಾದ ಅತಿಸಾರ ಭೇದಿ, ನಿರ್ಜಲೀಕರಣ ಹಾಗೂ ವಾಂತಿ ತಡೆಗಟ್ಟಬಹುದು. 10 ವರ್ಷ ಮತ್ತು 16ನೇ ವರ್ಷದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಟಿ.ಡಿ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 2018ರಲ್ಲಿ 1 ಮತ್ತು 2019ರಲ್ಲಿ 8 ಡಿಫ್ತಿರಿಯಾ ಪ್ರಕರಣ ವರದಿಯಾಗಿವೆ’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಅತಿಸಾರ ಭೇದಿಯಿಂದ ಆಸ್ಪತ್ರೆಗೆ ದಾಖಲಾಗುವ ಶೇ 40ರಷ್ಟು ಮಕ್ಕಳು ರೋಟಾವೈರಸ್ ಸೋಂಕಿಗೆ ತುತ್ತಾಗಿರುತ್ತವೆ. ಆದ್ದರಿಂದ ರೋಟಾವೈರಸ್ ಚಿಕಿತ್ಸೆಯನ್ನು ಭಾರತ ಸರ್ಕಾರವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲು ತೀರ್ಮಾನಿಸಿದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಡಾ.ಮಿಸ್ಬಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.