ಬುಧವಾರ, ಸೆಪ್ಟೆಂಬರ್ 22, 2021
24 °C
ಪಹಣಿ ತಿದ್ದುಪಡಿ–ರೈತರಿಗೆ ನೆರವು: ನಿರ್ಗಮಿತ ಉಪ ವಿಭಾಗಾಧಿಕಾರಿ ಸೋಮಶೇಖರ್ ಹೇಳಿಕೆ

ಕೋಲಾರ: ಜಿಲ್ಲೆಯಲ್ಲಿ ಸೇವೆ ತೃಪ್ತಿ ತಂದಿದೆ, ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಾನು ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗ ಸುಮಾರು 25 ಸಾವಿರ ಪಹಣಿ ತಿದ್ದುಪಡಿ ಮತ್ತು 3,500 ಪಿ ನಂಬರ್ ತೆಗೆಯಲಾಗಿದೆ. ಕೋವಿಡ್ ಸಂಕಷ್ಟದಲ್ಲಿದ್ದ 20 ಸಾವಿರ ವಲಸೆ ಕಾರ್ಮಿಕರಿಗೆ ಸ್ಪಂದಿಸುವ ಕೆಲಸ ಮಾಡಿದೆ. ಜಿಲ್ಲೆಯಲ್ಲಿನ ಸೇವೆ ತೃಪ್ತಿ ತಂದಿದೆ’ ಎಂದು ನಿರ್ಗಮಿತ ಉಪ ವಿಭಾಗಾಧಿಕಾರಿ ಸೋಮಶೇಖರ್ ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ರೈತರು ಪಹಣಿ ತಿದ್ದುಪಡಿಗೆ ಮತ್ತು ಪಿ ನಂಬರ್ ತೆಗೆಸಲು ಅಲೆದಾಡುವ ಪರಿಸ್ಥಿತಿಯಿದೆ. ರೈತರ ಸಂಕಷ್ಟ ಅರಿತು ದಾಖಲೆ ರೀತಿಯಲ್ಲಿ ಶೀಘ್ರವಾಗಿ ಪಹಣಿ ತಿದ್ದುಪಡಿ ಕೆಲಸ ಪೂರ್ಣಗೊಳಿಸಲಾಯಿತು’ ಎಂದರು.

‘ಬಿಜಿಎಂಎಲ್‌ನ ಸುಮಾರು 3,500 ಸಾವಿರ ಎಕರೆ ಜಾಗ ಗುರುತಿಸಿ, ಅಲ್ಲಿ 800 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದು ಖುಷಿ ತಂದಿದೆ. ಪಹಣಿ ತಿದ್ದುಪಡಿ, ಸರ್ವೆ ದಾಖಲೆಪತ್ರ ನಿರ್ವಹಣೆ, ಸರ್ಕಾರಿ ಜಮೀನು ಉಳಿಸುವ ಕಾರ್ಯದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ನಿರೀಕ್ಷಕರು ಹಾಗೂ ನೌಕರರು ನನ್ನ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದರು’ ಎಂದು ಸ್ಮರಿಸಿದರು.

‘ಕೋಲಾರ ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿದ್ದರೂ ಅಭಿವೃದ್ಧಿಯಾಗಿಲ್ಲ. ಇದೀಗ ವೇಮಗಲ್, ನರಸಾಪುರ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಆಗುತ್ತಿವೆ. ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಅಂತರ್ಜಲ ವೃದ್ಧಿಯಾಗಿದ್ದು, ಕೃಷಿ ಪೂರಕ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಏಳೆಂಟು ವರ್ಷಗಳಲ್ಲಿ ಜಿಲ್ಲೆ ಸಂಪೂರ್ಣ ಅಭಿವೃದ್ಧಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಜಿಲ್ಲೆಗೆ ಹೊಸಬ. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ, ರೈತರ ಮತ್ತು ಜನಪರ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗಲು ನೌಕರರು ಸಹಕಾರ ನೀಡಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ನೂತನ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್‌ಮೀನಾ ಭರವಸೆ ನೀಡಿದರು.

ಕ್ರಾಂತಿ ಸೃಷ್ಟಿ: ‘ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಸೋಮಶೇಖರ್ ಅವರು ಕಂದಾಯ ಇಲಾಖೆಯಲ್ಲಿ ಕ್ರಾಂತಿ ಸೃಷ್ಟಿಸಿದರು. ರಾಜ್ಯದಲ್ಲೇ ಮೊದಲಿಗೆ ಜಿಲ್ಲೆಯ ಎಲ್ಲಾ 156 ಗ್ರಾ.ಪಂಗಳಿಗೆ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಒದಗಿಸಿಕೊಟ್ಟರು. ಸರ್ಕಾರಿ ನೌಕರರ ಸಂಘಕ್ಕೆ 5 ಎಕರೆ ಜಾಗ ಮಂಜೂರಾತಿಗೆ ಒಂದೇ ದಿನದಲ್ಲಿ ಕಡತ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದರು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಕೃತಜ್ಞತೆ ಸಲ್ಲಿಸಿದರು.

‘15 ಸಾವಿರ ಕಡತಗಳ ವಿಲೇವಾರಿ, ಸ್ಮಶಾನಗಳಿಗೆ ಜಾಗ ನೀಡಿದ್ದು, ಪಶುಪಾಲನಾ ಇಲಾಖೆಗೆ ಜಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಟ್ಟಡಕ್ಕೆ ಜಾಗ ನೀಡಿದ್ದು, ಕೋವಿಡ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದು ಸ್ಮರಣೀಯ’ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅಜಯ್, ಖಜಾಂಚಿ ವಿಜಯ್, ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.