ಗುರುವಾರ , ಮಾರ್ಚ್ 30, 2023
24 °C

ನೊಂದ ಮಹಿಳೆಗೆ ಒಂದೇ ಸೂರಿನಡಿ ಸೇವೆ: ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಎಲ್ಲಾ ಅಗತ್ಯ ಸೇವೆ ಕಲ್ಪಿಸಬೇಕು. ನೊಂದ ಮಹಿಳೆಯರು ಪ್ರಕರಣ ದಾಖಲಿಸುವಾಗ ಮತ್ತೊಮ್ಮೆ ಅವರಿಗೆ ಹಿಂಸೆ ಅಥವಾ ಮುಜುಗರವಾಗುವ ಸನ್ನಿವೇಶ ಸೃಷ್ಟಿಸಬೇಡಿ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾಧಾರ, ‘ಸಖಿ’ ಒನ್ ಸ್ಟಾಪ್ ಸೆಂಟರ್, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಂಬಂಧ ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸಖಿ ಕೇಂದ್ರದಲ್ಲಿ ದಿನದ 24 ತಾಸೂ ಸಿಬ್ಬಂದಿ ಹಾಜರಿದ್ದು, ಯಾವುದೇ ಭೇದಭಾವವಿಲ್ಲದೆ ನೊಂದ ಮಹಿಳೆಯರಿಗೆ ಉಚಿತವಾಗಿ ಸೌಲಭ್ಯ ನೀಡಬೇಕು’ ಎಂದು ತಿಳಿಸಿದರು.

‘ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸ್ವಾಧಾರ ಯೋಜನೆಯಡಿ ಆಶ್ರಯ, ಆಹಾರ, ಬಟ್ಟೆ, ತರಬೇತಿ ಹಾಗೂ ಶಿಕ್ಷಣ ನೀಡುವ ಮೂಲಕ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡಿ. ಸ್ವಾಧಾರ ಗೃಹ ಕೇಂದ್ರದಲ್ಲಿ ಫಲಾನುಭವಿಗಳಿಗೆ ಊಟ, ಬಟ್ಟೆ ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಕಲ್ಪಿಸಿ’ ಎಂದು ಹೇಳಿದರು.

‘ಅಪೌಷ್ಟಿಕತೆ ತಡೆಗಾಗಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಜಾರಿಯಾಗಿದೆ. ಈ ಯೋಜನೆ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಬಾರದು. ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಜನಾಂದೋಲನ ಹಾಗೂ ಸಮುದಾಯ ಆಧಾರಿತ ಚಟುವಟಿಕೆ ಸಂಘಟಿಸಿ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಪೌಷ್ಟಿಕತೆ ಮಹತ್ವದ ಅರಿವು ಮೂಡಿಸಿ’ ಎಂದು ಸಲಹೆ ನೀಡಿದರು.

ರಕ್ಷಣೆ ಒದಗಿಸಿ: ‘ಕುಟುಂಬದಲ್ಲಿ ಹಿಂಸೆಗೊಳಗಾದ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಒದಗಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೌರ್ಜನ್ಯಕ್ಕೊಳಗಾದ ಮಹಿಳೆಯ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಪ್ರಕರಣ ಬಗೆಹರಿಸಿ. ಅಗತ್ಯವಿದ್ದರೆ ವಕೀಲರ ಸಹಯೋಗದೊಂದಿಗೆ ಉಚಿತ ಕಾನೂನು ನೆರವು ಒದಗಿಸಿ’ ಎಂದರು.

‘ದೇವಾಲಯಗಳಲ್ಲಿ ಮದುವೆಯಾಗುವ ವಧು ವರರ ಜನ್ಮ ದಿನಾಂಕದ ದಾಖಲೆಪತ್ರಗಳನ್ನು ತಹಶೀಲ್ದಾರ್ ಅಥವಾ ಮುಜರಾಯಿ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ಬಾಲ್ಯವಿವಾಹ ತಡೆಯಬೇಕು. ಜಿಲ್ಲೆಯ ಗಡಿ ಭಾಗಗಳಲ್ಲಿ ನಡೆಯುವ ಮದುವೆಗಳ ಬಗ್ಗೆ ಮಾಹಿತಿ ಕಲೆ ಹಾಕಿ’ ಎಂದು ಸೂಚನೆ ನೀಡಿದರು.

ಪೌಷ್ಟಿಕತೆಗೆ ಗಮನ: ‘ಮಾಲೂರು ತಾಲ್ಲೂಕಿನ ಆಶಾ ಭವನ ಸಂಸ್ಥೆಯಲ್ಲಿ ಸ್ವಾಧಾರ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರ ಆರೋಗ್ಯ ಮತ್ತು ಪೌಷ್ಟಿಕತೆಗೆ ಹೆಚ್ಚು ಗಮನ ನೀಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ವಿವರಿಸಿದರು.

‘ಪೋಷಣ್‌ ಅಭಿಯಾನದಡಿ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ತಿಂಗಳ 1ನೇ ಮತ್ತು 3ನೇ ಶುಕ್ರವಾರ ಸಮುದಾಯ ಆಧಾರಿತ ಚಟುವಟಿಕೆ ನಡೆಸಲಾಗುತ್ತಿದೆ. ಅನ್ನಪ್ರಾಶನ ದಿವಸ ಕಾರ್ಯಕ್ರಮದ ಮೂಲಕ ಮಗುವಿಗೆ 6 ತಿಂಗಳವರೆಗೆ ಎದೆ ಹಾಲು ನೀಡಿದ ನಂತರ ಮೇಲು ಆಹಾರ ಆರಂಭಿಸುವ ಬಗ್ಗೆ ಮಾಹಿತಿ ಜತೆ ಅಂಗನವಾಡಿ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೋವಿಡ್‌ ಲಸಿಕೆ: ‘ಬಾಣಂತಿಯರಿಗೆ ಕೋವಿಡ್‌ ಲಸಿಕೆ ಕೊಟ್ಟರೆ ಎದೆ ಹಾಲು ಕುಡಿಸುವುದರಿಂದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿ ಕೊರೊನಾ ಸೋಂಕು ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಲಸಿಕೆ ಹಾಕುವುದರಿಂದ ಹುಟ್ಟುವ ಮಗುವಿಗೆ ಕೋವಿಡ್‌ ಬರುವುದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎ.ಸಿ.ರಾಜಣ್ಣ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು