ಗುರುವಾರ , ಡಿಸೆಂಬರ್ 3, 2020
23 °C
ಕೃತಕ ಹೊಂಡದಲ್ಲಿ ಪ್ರಾಯೋಗಿಕ ಕೃಷಿ

ಬಯಲು ಸೀಮೆಯಲ್ಲಿ ಸೀಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕೃತಕ ಹೊಂಡದಲ್ಲಿ ಪ್ರಾಯೋಗಿಕವಾಗಿ ಸೀಗಡಿ ಕೃಷಿ ನಡೆಸುವ ಮೂಲಕ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಜಿಲ್ಲೆಯ ವಿವಿಧ ರೈತರು ಸೇರಿದಂತೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಯಶಸ್ವಿನಿ ಹೇಳಿದರು.

ತಾಲ್ಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ಕೃತಕ ಸಿಹಿ ನೀರಿನ ಹೊಂಡಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸೀಗಡಿ ಕೃಷಿ ನಡೆಸುತ್ತಿರುವ ರೈತನ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಈ ಹಿಂದೆ ರಾಜ್ಯದ ಕುಮಟಾ ಸೇರಿದಂತೆ ನೆರೆಯ ಆಂಧ್ರದ ನಲ್ಲೂರಿನಲ್ಲಿ ಸೀಗಡಿ ಬೆಳೆಸುತ್ತಿದ್ದರು. ಆದರೆ, ನಮ್ಮ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸೀಗಡಿ ಬೆಳೆಸಲು ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಮುಂದಾಗಿದ್ದಾರೆ. ನೂರು ದಿನಗಳಲ್ಲಿ ಸುಮಾರು 5 ಸಾವಿರ ಕೆಜಿ ಸೀಗಡಿ ಬೆಳೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ಸೀಗಡಿ ಬೆಳೆಗಾರರಿಗೆ ಬೇಕಾಗಿರುವ ಅಗತ್ಯ ಸವಲತ್ತುಗಳನ್ನು ಇಲಾಖೆ ನೀಡಲು ಸಿದ್ಧವಾಗಿದೆ’ ಎಂದರು.

ರೈತ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಮಾತನಾಡಿ, ‘ಆಗಸ್ಟ್‌ನಲ್ಲಿ ನಲ್ಲೂರಿನಿಂದ ಎರಡು ಲಕ್ಷ ಮರಿಗಳನ್ನು ತರಿಸಿ ನಮ್ಮ ತೋಟದಲ್ಲಿ ಸುಮಾರು 300 ಅಡಿ ಉದ್ದ ಹಾಗೂ 100 ಅಡಿ ಅಗಲದ ನೀರಿನ ಹೊಂಡದಲ್ಲಿ ಬಿಡಲಾಗಿತ್ತು. ಇದೀಗ ಸುಮಾರು 5 ಸಾವಿರ ಕೆಜಿಯಷ್ಟು ಸೀಗಡಿ ಬೆಳೆದಿದ್ದೇನೆ. ಸೀಗಡಿ ಕೃಷಿ ಮಾಡುವುದರಿಂದ ಪ್ರತಿಯೊಬ್ಬ ರೈತನು ಆರ್ಥಿಕವಾಗಿ ಮುಂದುವರೆಯಬಹುದು’ ಎಂದರು.

ಬೆಂಗಳೂರಿನ ಎಬಿಟಿ ಕಾರ್ಪೊರೇಷನ್‌ನ ವಿಜ್ಞಾನಿ ಡಾ.ವಿಶ್ವನಾಥರೆಡ್ಡಿ ಮಾತನಾಡಿ, ‘ನಾನು ಇದೇ ಭಾಗದವನಾಗಿದ್ದು ನಮ್ಮ ಬಯಲುಸೀಮೆ ಭಾಗದಲ್ಲಿ ಸೀಗಡಿ ಬೆಳೆಯಬೇಕು ಎನ್ನುವ ಆಲೋಚನೆ ಬಂದಾಗ ಈ ಭಾಗದ ರೈತ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಮುಂದೆ ಬಂದು ಪ್ರಾಯೋಗಿಕವಾಗಿ ಸೀಗಡಿ ಬೆಳೆಯಲು ಧೈರ್ಯ ಮಾಡಿದ್ದಾರೆ. ಕಳೆದ ನೂರು ದಿನಗಳಲ್ಲಿ ಸುಮಾರು 5 ಸಾವಿರ ಕೆಜಿಯಷ್ಟು ಸೀಗಡಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಮತ್ತಷ್ಟು ರೈತರಿಗೆ ಸೀಗಡಿ ಬೆಳೆಯಲು ಪ್ರೋತ್ಸಾಹಿಸಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭರತ್, ಗ್ರಾಮಸ್ಥರಾದ ಆನಂದರೆಡ್ಡಿ, ರವಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.