ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೌಶಲಾಧಾರಿತ ಶಿಕ್ಷಣ ಎನ್‍ಇಪಿ ಆಶಯ'

ಭಾರತವನ್ನು ಔದ್ಯೋಗಿಕ ಕ್ರಾಂತಿಗೆ ಸಿದ್ಧಪಡಿಸಿ: ಒರಿಗಾಮಿ ತಜ್ಞ ಶಾಸ್ತ್ರಿ ಹೇಳಿಕೆ
Last Updated 22 ಡಿಸೆಂಬರ್ 2021, 16:01 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜ ಹಾಗೂ ದೇಶವನ್ನು 4ನೇ ಔದ್ಯೋಗಿಕ ಕ್ರಾಂತಿಗೆ ಸಿದ್ಧಪಡಿಸುವ ಹಾದಿಯಲ್ಲಿ 2030ರೊಳಗೆ ದೇಶದಲ್ಲಿ ಶೇ 51ರಷ್ಟು ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ರೂಪಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಆಶಯ’ ಎಂದು ಗಣಿತ ಸಂವಹನಕಾರರು ಹಾಗೂ ಒರಿಗಾಮಿ ತಜ್ಞ ವಿ.ಎಸ್.ಎಸ್.ಶಾಸ್ತ್ರಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಗಣಿತ ಕಷ್ಟವೆಂಬ ಭಾವನೆ ಹೋಗಲಾಡಿಸಿ ಆಪ್ಯಾಯಮಾನಗೊಳಿಸುವ ನಿಟ್ಟಿನಲ್ಲಿ ಒರಿಗಾಮಿ ಕಲೆ ಹೆಚ್ಚು ಸಹಕಾರಿ. ಇದಕ್ಕೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ 6ನೇ ತರಗತಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ ಮಾಡಬೇಕೆಂಬ ಅಂಶವಿದೆ ಮತ್ತು ವಿಷಯ ಯಾವುದೇ ಇದ್ದರೂ ಇಂಟರ್ನ್‌ಶಿಪ್‌ ಕಡ್ಡಾಯವಾಗಲಿದೆ. ಕೌಶಲ ಕಲಿಸುವ ಹಾದಿಯಲ್ಲಿ ದೊಡ್ಡ ಕ್ರಾಂತಿಯಾಗಲಿದೆ’ ಎಂದರು.

‘ಗಣಿತದ ಹಾದಿ ದುರಂತದಲ್ಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿ ಗಣಿತಕ್ಕೆ ಆಕರ್ಷಣೆ ಇಲ್ಲವಾಗಿರುವುದೆ ಇದಕ್ಕೆ ಕಾರಣ. ಎನ್‍ಇಪಿಯಲ್ಲಿ ನಾನೂ ಸದಸ್ಯನಾಗಿದ್ದೇನೆ. ಒರಿಗಾಮಿಯನ್ನು ಗಣಿತಕ್ಕೆ ಒಗ್ಗಿಸುವುದು ಹೇಗೆ ಎಂಬ ಕೌಶಲ ರೂಪಿಸಬೇಕಿದೆ. ಆಟಿಕೆಗಳ ಮೂಲಕ ಗಣಿತ ಸುಲಭಗೊಳಿಸಿ ಮಕ್ಕಳಲ್ಲಿ ಗಣಿತ ಕಲಿಕಾಸಕ್ತಿ ಹೆಚ್ಚಿಸಬಹುದು’ ಎಂದು ವಿವರಿಸಿದರು.

ಗಣಿತ ಜನಪ್ರಿಯ: ‘ಒರಿಗಾಮಿ ಕಲೆ ಮೂಲಕ ಗಣಿತವನ್ನು ಜನಪ್ರಿಯಗೊಳಿಸುವ ಸಾಧಕರಲ್ಲಿ ಶಾಸ್ತ್ರಿಯವರು ಒಬ್ಬರಾಗಿದ್ದಾರೆ, ಅವರ ಗಣಿತದ ಆಧಾರದೊಂದಿಗೆ ಕಾಗದ ಕತ್ತರಿಸುವ ಕಲೆಯಲ್ಲೂ ವಿಶೇಷವಿದೆ. ಶಾಸ್ತ್ರಿಯವರಿಂದ ಕನಿಷ್ಠ 10 ವಿದ್ಯಾರ್ಥಿಗಳಾದರೂ ಒರಿಗಾಮಿ ಕಲೆ ಕಲಿತು ಮುಂದಿನ ಪೀಳಿಗೆ ಈ ಕಲೆ ಉಳಿಸಿ ಬೆಳೆಸಬೇಕು’ ಎಂದು ಬೆಂಗಳೂರು ಉತ್ತರ ವಿ.ವಿ ಕುಲಪತಿ ನಿರಂಜನ ವಾನಳ್ಳಿ ಕಿವಿಮಾತು ಹೇಳಿದರು.

‘ತಮಿಳುನಾಡಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ಅವರೇ ಒಂದು ವಿಸ್ಮಯ. ಅವರು ಗಣಿತಕ್ಕೆ ನೀಡಿರುವ ಕೊಡುಗೆ ಅಪಾರ. ಮುಂದಿನ ವರ್ಷ ರಾಮಾನುಜನ್ ಹುಟ್ಟುಹಬ್ಬವನ್ನು ಅತಿ ಹೆಚ್ಚು ಗಣಿತ ಬಿಎಸ್ಸಿ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಆಚರಿಸೋಣ. ಸಮಾಜ-ಮತ್ತು ಕಾಲೇಜುಗಳ ನಡುವಿನ ಅಂತರ ಮುಚ್ಚೋಣ’ ಎಂದು ತಿಳಿಸಿದರು.

3,500 ಸೂತ್ರ: ‘ರಾಮಾನುಜನ್ ಅವರು 3,500 ಗಣಿತ ಸೂತ್ರ ನೀಡಿದ್ದಾರೆ. ಅವರು ಬದುಕಿದ್ದು 32 ವರ್ಷವಾದರೂ ಅವರ ಕೊಡುಗೆ ಅಪಾರ. ಅವರ ಸೂತ್ರಗಳನ್ನು ಇಂದಿಗೂ ಅನೇಕ ತಜ್ಞರಿಂದ ಪರಿಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಗಣಿತದಲ್ಲಿ ವಿಶೇಷವಿದೆ, ಗಣಿತ ಸ್ನಾತಕೋತ್ತರ ವಿದ್ಯಾರ್ಥಿಗಳು ಬೇರೆ ಸಂಯೋಜನೆಗಳಿಗಿಂತ ವಿಭಿನ್ನ ಎಂಬುದನ್ನು ಸಾಧಿಸಿ ಮುನ್ನಡೆಯಿರಿ’ ಎಂದು ವಿ.ವಿ ಸ್ನಾತಕೋತ್ತದ ಕೇಂದ್ರದ ನಿರ್ದೇಶಕಿ ಡಿ.ಕುಮುದಾ ಆಶಿಸಿದರು.

ವಿ.ವಿ ಕುಲಸಚಿವ ಜನಾರ್ದನಂ, ಆರ್ಥಿಕ ಅಧಿಕಾರಿ ವಸಂತಕುಮಾರ್, ಗಣಿತ ವಿಭಾಗದ ಮುಖ್ಯಸ್ಥೆ ಸಿ.ಎಸ್.ಶ್ರೀಲತಾ, ಉಪನ್ಯಾಸಕ ಶಿವರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT