ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ಕಳ್ಳರಿಂದ ರಕ್ಷಣೆಗೆ ವಿಶೇಷ ಪೊಲೀಸ್ ತಂಡ: ಎಸ್ಪಿ

Published 14 ಜೂನ್ 2024, 15:39 IST
Last Updated 14 ಜೂನ್ 2024, 15:39 IST
ಅಕ್ಷರ ಗಾತ್ರ

ಕೆಜಿಎಫ್‌: ಕಳ್ಳರಿಂದ ಭೀತಿ ಎದುರಿಸುತ್ತಿರುವ ಸ್ವರ್ಣನಗರದ ನಿವಾಸಿಗಳಿಗೆ ರಕ್ಷಣೆ ನೀಡಲು ಒಂದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ಸ್ವರ್ಣನಗರದ ನಿವಾಸಿಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಒಬ್ಬ ಸಬ್‌ ಇನ್‌ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್‌, ಐವರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ಮೋಟಾರ್ ಬೈಕ್‌ ಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಯಾವುದೇ ಅನುಮಾನ ಕಂಡರೆ ನೇರವಾಗಿ ತಮಗೆ ಮಾಹಿತಿ ನೀಡಬಹುದು ಎಂದು ಹೇಳಿದರು.

ಪೊಲೀಸರು ಇರುವುದು ಜನರ ರಕ್ಷಣೆಗೆ. ಜನರಿಗೆ ತೊಂದರೆಯಾದಾಗ ಅವರಿಗೆ ಅಭಯ ನೀಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ಅವರ ಬಗ್ಗೆ ಕೂಡ ಮಾಹಿತಿ ನೀಡಬೇಕು. ಭಾನುವಾರದಂದು ಬಡಾವಣೆಯಲ್ಲಿ ನಾಗರಿಕ, ಸೈಬರ್ ಮತ್ತು ಕ್ರೈಂ ಪೊಲೀಸರು ಜಂಟಿಯಾಗಿ ಸಭೆ ನಡೆಸಲಿದ್ದಾರೆ. ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ವಿವರಣೆ ಕೊಡಲಿದ್ದಾರೆ. ಬಡಾವಣೆಯ ಹೆಚ್ಚು ಜನ ಸಭೆಯಲ್ಲಿ ಭಾಗವಹಿಸಬೇಕು ಎಂದು ಎಸ್ಪಿ ಕೋರಿದರು.

ಬಡಾವಣೆಯ ಮುಖಂಡ ಮುನಿರತ್ನಂ ಮಾತನಾಡಿ, ಹಿಂದೆ ನಡೆದಿದ್ದ ದರೋಡೆ ಮಾದರಿಯಲ್ಲಿಯೇ ಈಗ ದರೋಡೆ ಮಾಡಲು ಸಂಚು ನಡೆಸಲಾಗುತ್ತಿದೆ ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಯಿಂದ ತಿಳಿಯುತ್ತಿದೆ. ಜನರ ಭೀತರಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಅಗತ್ಯ ಇದೆ ಎಂದು ಹೇಳಿದರು.

ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ ಮಾತನಾಡಿ, ಶಬ್ದ ಬಾರದ ಯಂತ್ರಗಳಿಂದ ಕಿಟಕಿ ಸರಳುಗಳನ್ನು ಕತ್ತರಿಸಲಾಗಿದೆ. ಆಧುನಿಕ ಯಂತ್ರಗಳನ್ನು ಇಟ್ಟುಕೊಂಡು ಕಳ್ಳತನ ಮಾಡಲು ಯತ್ನಿಸುತ್ತಿದ್ದಾರೆ. ನಿವಾಸಿಗಳು ನಿರಾಳವಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ದೂರು ಕೊಟ್ಟರೆ ಕೂಡ ಪೊಲೀಸರು ಎಫ್‌ಐಆರ್ ಹಾಕುತ್ತಿಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲವೇ, ದೂರು ಕೊಡಬೇಡಿ ಎಂದು ಪುಸಲಾಯಿಸುತ್ತಾರೆ ಎಂದು ಹೇಳಿದರು.

ಈಚೆಗೆ ನೇಮಕವಾಗುತ್ತಿರುವ ಪೊಲೀಸ್ ಸಿಬ್ಬಂದಿ ಬಡಾವಣೆಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುತ್ತಿಲ್ಲ. ಬೀಟ್ ಪೊಲೀಸರೇ ಕಾಣುತ್ತಿಲ್ಲ. ಸ್ವರ್ಣ ನಗರದಲ್ಲಿ ಇರುವ ನಿವಾಸಿಗಳು ಬಹುತೇಕರು ಉದ್ಯೋಗಿಗಳಾಗಿದ್ದಾರೆ. ಮನೆ ಬಿಟ್ಟು ಹೋಗುವುದಕ್ಕೆ ಅವರು ಕೂಡ ಭಯ ಪಡುತ್ತಿದ್ದಾರೆ ಎಂದು ಮುಖಂಡ ಹರೀಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT