ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿವಾರಣೆಗೆ ಕ್ರೀಡೆ ಮದ್ದು: ದಸರಾ ಕ್ರೀಡಾಕೂಟದಲ್ಲಿ ಶಾಸಕ ಶ್ರೀನಿವಾಸಗೌಡ

Last Updated 18 ಸೆಪ್ಟೆಂಬರ್ 2019, 14:26 IST
ಅಕ್ಷರ ಗಾತ್ರ

ಕೋಲಾರ: ‘ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಸಕ್ತಿ ಇರುವ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಸಮಗ್ರ ಶಿಕ್ಷಣದ ಭಾಗವಾದ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ’ ಎಂದರು.

‘ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ಮಾತಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ’ ಎಂದು ಅಭಿಪ್ರಾಯಪಟ್ಟರು.

‘ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಆಧುನಿಕತೆ ಬೆಳೆದಂತೆ ಕ್ರೀಡೆಗಳು ಮರೆಯಾಗುತ್ತಿವೆ. ಈ ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ, ಈಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ರೋಗ ನಿವಾರಣೆಗೆ ಕ್ರೀಡೆ ಒಳ್ಳೆಯ ಮದ್ದು’ ಎಂದರು.

ಉತ್ತಮ ಅವಕಾಶ: ‘ಕ್ರೀಡಾ ಇಲಾಖೆಯು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿಸುತ್ತಿದ್ದು, ಬೇರೆ ಬೇರೆ ದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶವಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

‘ಕ್ರೀಡೆಗಳಿಂದ ಜೀವನ ಸರಿಯಾಗಿ ರೂಪುಗೊಳ್ಳುತ್ತದೆ. ಜಿಲ್ಲಾ ಮಟ್ಟದಲ್ಲಿ ಗೆಲ್ಲುವ ಅಭ್ಯರ್ಥಿಗಳು ಮೈಸೂರಿನಲ್ಲಿ ನಡೆಯುವ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು’ ಎಂದು ಆಶಿಸಿದರು.

ವಿವಿಧ ತಾಲ್ಲೂಕುಗಳು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ವಿ.ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT